ರಾಷ್ಟ್ರಪತಿಗಳ ಮೂಲ ರಾಜ್ಯವಾದ ಓರಿಸ್ಸಾದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಐಐಐಟಿ ಧಾರವಾಡ ಸಿದ್ದಪಡಿಸಿದೆ.
ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಐಐಟಿ ಧಾರವಾಡಕ್ಕೆ ರಾಷ್ಟ್ರಪತಿಗಳು ಸೋಮವಾರದಂದು ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26 ರಂದು ಮಧ್ಯಾಹ್ನ ಐಐಐಟಿ ಧಾರವಾಡ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯು ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ಹುಮುನೊಯ್ಡ ರೋಬೋಟ್ (Humanoid Robot) ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ.
ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿಭಾಷಾನುವಾದದ ಉಪಕರಣವನ್ನು ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆಯೆಂದು ಈ ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕರು ಹಾಗೂ ಈ ಯೋಜನೆಯ ಪ್ರಧಾನ ಪರೀಕ್ಷಕರಾದ ಡಾ.ಕೆ.ಟಿ.ದೀಪಕ ತಿಳಿಸಿದ್ದಾರೆ.
ಪ್ರಸ್ತುತ ಈ ರೋಬೋಟ್ ತಂತ್ರಜ್ಞಾನದಲ್ಲಿ ಬುಡಕಟ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಮಾಹಿತಿಯು ಬುಡಕಟ್ಟಿನ ಭಾಷೆಯಲ್ಲಿ ದೊರೆಯಲಿದೆ.
ಈ ಯೋಜನೆಯಲ್ಲಿ ಓರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆಗಳನ್ನು ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇದರಿಂದಾಗಿ ಇಂಗ್ಲೀಷ್ ಭಾಷೆಯಿಂದ ಹೇಳಲ್ಪಟ್ಟ ಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಇಂಗ್ಲೀಷ್ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದಂತಹ ತಂತ್ರಲಿಪಿಯನ್ನು ಸಿದ್ಧಪಡಿಸಲಾಗುತ್ತಿದೆ.
ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ದೀಪಕ್ ತಿಳಿಸಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಲಿಪಿಯಲ್ಲಿನ ಭಾಷೆ ಸಾಕಾಷ್ಟು ಜ್ಞಾನವಿರುವ ಈ ಬುಡಕಟ್ಟು ಜನಾಂಗದಲ್ಲಿ ಈ ತಂತ್ರಜ್ಞಾನ ಉಪಯೋಗವಾದರೆ ಜೀವವೈವಿಧ್ಯತೆ, ಪ್ರಾಣಿಗಳ ಜ್ಞಾನ, ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕøತಿ ಡಿಜಿಟಲ್ ರೂಪದಲ್ಲಿ ಹಿಡಿದಿಟ್ಟುಕೊಂಡು ಹೊರ ಜಗತ್ತಿಗೆ ಗೊತ್ತಾಗಲಿದೆ.
ಧಾರವಾಡ, ಹೈದ್ರಾಬಾದ್ ಹಾಗೂ ಭುವನೇಶ್ವರ ಐಐಐಟಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಡಾ.ಪ್ರಕಾಶ ಪವಾರ ಹಾಗೂ ಡಾ.ಸಿಬಾಶಂಕರಪಾಡಿ ತೊಡಗಿಸಿಕೊಂಡಿದ್ದಾರೆ.
ನವದೆಹಲಿಯ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ 44.53 ಲಕ್ಷ ಅನುದಾನವನ್ನು ನೀಡಿದೆ.
ಸಂಸ್ಥೆಗೆ ನಿನ್ನೆ ಭೇಟಿ ನೀಡಿದ ವಾರ್ತಾ ಇಲಾಖೆಯ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಹಾಗೂ ವಾರ್ತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡೊಳ್ಳಿನ ಅವರಿಗೆ ಸದರಿ ಸಂಶೋಧನಾ ವಿಷಯಗಳ ಬಗ್ಗೆ ಡಾ.ಕೆ.ಟಿ.ದೀಪಕ್ ಸವಿಸ್ತಾರವಾಗಿ ವಿವರಿಸಿದರು.