ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಹದವಾಗಿ ಮಳೆಯಾಗುತ್ತಿದ್ದು, ರೈತರು ಬೆಳೆ ಸಂರಕ್ಷಣೆಗೆ ಉಪ ಕ್ರಮಗಳನ್ನು ಅನುಸರಿಸಬೇಕು. ಕೇವಲ ಯೂರಿಯಾ ಗೊಬ್ಬರಕ್ಕೆ ದುಂಬಾಲು ಬೀಳದೆ ಬೇರೆ ಸಂಯುಕ್ತ ರಸ ಗೊಬ್ಬರಗಳನ್ನು ಬೆಳೆಗಳಿಗೆ ಒದಗಿಸಲು ಹಾಗೂ ನಿರ್ವಹಣೆ ಮಾಡಲು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರು ಸೂಚಿಸಿದ್ದಾರೆ.
ಸತತ ಮಳೆ: ಬೆಳೆ ಕಾಪಾಡಲು ಕೆಲ ಉಪಕ್ರಮಗಳು:
ಹೆಸರು ಮತ್ತು ಉದ್ದು ಬೂದಿ ರೋಗದ ಲಕ್ಷಣಗಳು ಕಂಡು ಬಂದರೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 1 ಗ್ರಾಂ ಕಾರ್ಬನ್ ಡೈಜಿಮ್ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ನಂಜಾಣು ರೋಗದ ಲಕ್ಷಣಗಳು ಕಂಡು ಬಂದರೆ ರೋಗ ಹರಡುವುದನ್ನು ತಡೆಯಲು 0.5 ಮೀ.ಲೀ. ಇಮಿಡಾಕ್ಲೊಪ್ರೀಡ್ ಅಥವಾ 0.3 ಗ್ರಾಂ ಅಸಿಟಮಾಪ್ರಿಡ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿರಿ. ನಂತರ ರೋಗಗ್ರಸ್ಥ ಗಿಡಗಳನ್ನು ಕಿತ್ತು ನಾಶಪಡಿಸಬೇಕು.
ಕಾಯಿ ಕಟ್ಟುವ ಹಂತದಲ್ಲಿ ಕಪ್ಪು ಮೂತಿ ಹುಳು (ಏಪಿಯಾನ್ ಕೀಟ) ಕಂಡು ಬಂದಲ್ಲಿ 2ಮಿ.ಲೀ ಇಮಿಡಾಕ್ಲೊಪ್ರೀಡ್ ಅಥವಾ 0.5 ಮಿ.ಲೀ ಲ್ಯಾಮ್ಡಾಸೈಲೋಥ್ರಿನ್ ಅಥವಾ 0.3 ಗ್ರಾಂಇಮಾಮೆಕ್ಟಿನ್ ಬೆಂಝೋಯೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ನಿಯಂತ್ರಣವಾಗದಿದ್ದಲ್ಲಿ ಮತ್ತೆ 12 ದಿನಗಳ ಅಂತರದಲ್ಲಿ ಇನ್ನೊಮ್ಮೆ ಕೈಗೊಳ್ಳಬೇಕು.
ಸೋಯಾ ಅವರೆ ಕಾಪಾಡಲು ಕೆಲ ಉಪಕ್ರಮಗಳು:
ಹೆಚ್ಚಾದ ಮಳೆ ನೀರು ಹೊರ ಹಾಕುವುದು. ನಂಜುರೋಗ ಬಾಧಿತ ಸಸ್ಯಗಳನ್ನು ಕಿತ್ತು ಸಂಗ್ರಹಿಸಿ ನಾಶಪಡಿಸಬೇಕು. ಮುಂಚಿತ ಬಿತ್ತನೆಯ ಬೆಳೆಯಲ್ಲಿ ಹೆಕ್ಸಾಕೊನಾಜೋಲ್ ( 1 ಮಿಲೀ/ಲೀ) ಅಥವಾ ಪ್ರೊಪಿಕೋನಾಜೋಲ್ (1ಮಿ.ಲೀ) ಶಿಲೀಂದ್ರ ನಾಶಕದೊಡನೆ ಪೋಷಕಾಂಶಗಳ ಮಿಶ್ರಣ ಬೆರೆಸಿ ಸಿಂಪಡಿಸುವದರಿಂದ ರೋಗ ಬಾಧೆ ಉಲ್ಬಣ ತಡೆಯಬಹುದು.
ಬಳಸಬೇಕಾದ ಪೋಷಕಾಂಶಗಳು 19:19:19, 13:0:45 (ಅಥವಾ 0:52:34), ಲಘು ಪೋಷಕಾಂಶಗಳ ಮಿಶ್ರಣ. ಬೆಳವಣಿಗೆ ಹೆಚ್ಚಿದ್ದರೆ, ಸಾರಜನಕ ಯುಕ್ತಗೊಬ್ಬರ ಬಳಕೆ ಪ್ರಮಾಣಕಡಿಮೆ ಮಾಡಬೇಕು. ಕಳೆಗಳ ನಿರ್ವಹಣೆ ಅಗತ್ಯ ಸಾಧ್ಯವಿದ್ದಲ್ಲಿ ಕುರುಗುಂಟೆ ಅಥವಾ ಕೈ ನೇಗಿಲಿನಿಂದ ಎಡೆ ಹೊಡೆದರೆ ಕಳೆಗಳ ನಿರ್ವಹಣೆ ಸಾಧ್ಯ.
ಬಿತ್ತನೆಯಾಗಿ 25-35 ದಿನಗಳ ಹಂತದ ಬೆಳೆಯ ಸಾಲುಗಳ ಮಗ್ಗುಲಲ್ಲಿ 100 ಕೆ.ಜಿ.ಜಿಪ್ಸಂ, 5ಕೆಜಿ ಜಿಂಕ್ ಸಲ್ಪೇಟ್, 1ಕೆಜಿ ಬೋರಾನ್ ಕೊಡಬೇಕು. ಪೋಷಕಾಂಶಗಳ ಸಿಂಪರಣೆ ಅತ್ಯಗತ್ಯ. ಹೇನು, ಸೀರು ಇತರೆ ರಸ ಹೀರುವ ಕೀಟಗಳ ಬಾಧೆ ಹತೋಟಿಗೆ ಅಜಾಡಿರಕ್ಟಿನ್ 10000 ಪಿಪಿಎಂ 1ಮಿಲೀ, ಲೀ ದ್ರಾವಣ ಬಳಸಿ, ಬೆಳೆಯಲ್ಲಿ ಲದ್ದಿ ಹುಳು ಹತೋಟಿಗೆ ನುಮೋರಿಯ (ಮೆಟಾರೈಜಿಯಂ) ರಿಲೈಜೈವಿಕ ಶಿಲೀಂಧ್ರ ನಾಶಕ ಬಳಸುವುದು ಸೂಕ್ತ ಕೀಡೆಗಳ ಬಾಧೆ ಹೆಚ್ಚಿದ್ದಲ್ಲಿ ಸಂಪನ್ಮೂಲ ತಜ್ಞರ ಸಲಹೆ ಪಡೆಯುವುದು.
ಶೇಂಗಾ ಬೆಳೆ ಕಾಪಾಡಲು ಕೆಲ ಉಪಕ್ರಮಗಳು:
ಹೆಚ್ಚಾದ ಮಳೆ ನೀರು ಹೊರ ಹಾಕುವುದು. ಮುಂಚಿತ ಬೆತ್ತನೆಯ ಬೆಳೆಯಲ್ಲಿ, ಹೆಕ್ಸಾಕೊನಾಜೋಲ್(@ 1ಮಿಲೀ/ಲೀ) ಅಥವಾಕಾರ್ಬೆಂಡೆಜಿಂ(@ 2 ಗ್ರಾಂ/ ಲೀ) ಶಿಲೀಂಧ್ರ ನಾಶಕದೊಡನೆ ಪೋಷಕಾಂಶಗಳ ಮೀಶ್ರಣ ಬೆರೆಸಿ ಸಿಂಪರಿಸುವುದರಿಂದ ರೋಗ ಬಾಧೆ ಉಲ್ಬಣ ತಡೆಯಬಹುದು.
ಬಳಸಬೇಕಾದ ಪೋಷಕಾಂಶಗಳು 19:19:19, 13:0:45 (ಅಥವಾ 0:52:34), ಲಘು ಪೋಷಕಾಂಶಗಳ ಮಿಶ್ರಣ. ಬೆಳವಣಿಗೆ ಹೆಚ್ಚಿದ್ದರೆ, ಸಾರಜನಕಯುಕ್ತ ಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಬೇಕು. ಕಳೆಗಳ ನಿರ್ವಹಣೆ ಅಗತ್ಯ ಕಿರುಗುಂಟೆ ಅಥವಾ ಕೈ ನೇಗಿಲಿನಿಂದ ಎಡೆ ಹೊಡೆದರೆ ಕಳೆಗಳ ನಿರ್ವಹಣೆ ಸಾಧ್ಯ. ಬಿತ್ತನೆಯಾಗಿ 25-35 ದಿನಗಳ ಹಂತದ ಬೆಳೆಯ ಸಾಲುಗಳ ಮಗ್ಗುಲಲ್ಲಿ 100-200 ಕೆಜಿಜಿಪ್ಸಂ, 5 ಕೆಜಿಜಿಂಕ್ ಸಲ್ಫೇಟ್, 1 ಕೆಜಿ ಬೋರಾನ್ ಕೊಡಬೇಕು.
ಪೋಷಕಾಂಶಗಳ ಸಿಂಪರಣೆ ಅತ್ಯಗತ್ಯ: ಅತಿ ಮಳೆಯಿಂದ ದಿಂಡು ಏರಿಸಲು ಸಾಧ್ಯವಿಲ್ಲವಾದರೆ, ಎತ್ತರವಾಗಿ ಬೆಳೆದ ಬೆಳೆಯಲ್ಲಿ ಕಾಯಿ ಸಂಖ್ಯೆ ಕಡಿಮೆಯಾಗುವುದು ಇದನ್ನು ತಡೆಯಲು ಹಗುರವಾದ ಕಟ್ಟಿಗೆ ರೋಲರ್ನ್ನು ಬೆಳೆಯ ಮೇಲೆ ಉರುಳಿಸಬೇಕು. ಇದರಿಂದ ಊಡುಗಳು ಮಣ್ಣಿನ ಸಂಪರ್ಕ ಪಡೆದು ಕಾಯಿ ಸಂಖ್ಯೆ ಸುಧಾರಿಸುವುದು. ಬೆಳೆಯಲ್ಲಿ ಲದ್ದಿ ಹುಳು ಹತೋಟಿಗೆ ನುಮೋರಿಯ (ಮೆಟಾರೈಜಿಯಂ) ರಿಲೈ ಜೈವಿಕ ಶಿಲೀಂಧ್ರ ನಾಶಕ ಬಳಸುವುದು ಸೂಕ್ತ.
ಶೇಂಗಾ ಬೆಳೆ ಕಾಪಾಡಲು ಕೆಲ ಉಪಕ್ರಮಗಳು:
ಹೆಚ್ಚಾದ ಮಳೆ ನೀರು ಹೊರ ಹಾಕುವುದು. ಮುಂಚಿತ ಬಿತ್ತನೆಯ ಬೆಳೆಯಲ್ಲಿ, ಹೆಕ್ಸಾಕೊನಾಜೋಲ್ 1 ಮಿಲೀ ಶಿಲೀಂಧ್ರ ನಾಶಕದೊಡನೆ ಪೋಷಕಾಂಶಗಳ ಮಿಶ್ರಣ ಬೆರೆಸಿ ಸಿಂಪರಿಸುವುದರಿಂದ ರೋಗ ಬಾಧೆ ಉಲ್ಬಣ ತಡೆಯಬಹುದು.
ಬಳಸಬೇಕಾದ ಪೋಷಕಾಂಶಗಳು, 19:19:19, 13:0:45 (ಅಥವಾ 0:52:34), ಲಘು ಪೋಷಕಾಂಶಗಳ ಮಿಶ್ರಣ. ಕಳೆಗಳ ನಿರ್ವಹಣೆ ಅಗತ್ಯ ನೇಗಿಲಿನಿಂದ ಎಡೆ ಹೊಡೆದರೆ ಕಳೆಗಳ ಬೆಳವಣಿಗೆಯ ರಭಸ ತಗ್ಗಿಸಲು ಸಾಧ್ಯ. ಎಲ್ಲ ಪೋಷಕಾಂಶಗಳನ್ನು ಮಣ್ಣಿನ ಮೂಲಕ ಮತ್ತು ಎಲೆಯ ಮೂಲಕ ಕೊಟ್ಟಿದ್ದಲ್ಲಿ ನ್ಯಾನೋ ಯೂರಿಯಾ 2ಗ್ರಾಂ.ಲೀ ದ್ರಾವಣ ಸಿಂಪರಿಸಬಹುದು.
ಬೆಳೆ ಸಣ್ಣದಿದ್ದಲ್ಲಿ 20 ಕೆಜಿ ಯೂರಿಯಾ, 10ಕೆಜಿ ಎಂಒಪಿ ಕೊಟ್ಟು ಮಣ್ಣಿನಲ್ಲಿ ಮುಚ್ಚಬೇಕು. ಪೋಷಕಾಂಶಗಳ ಸಿಂಪರಣೆ ಅತ್ಯಗತ್ಯ. ಯೂರಿಯಾ ಉಗ್ಗಬಾರದು. ಚಂಡಮಾರುತಗಳ ಹಿನ್ನೆಲೆಯಲ್ಲಿ ಅತಿ ಮಳೆಯಷ್ಟೇ ಶುಷ್ಕ ಅವಧಿ ಸಹ ಬರುವ ಸಾಧ್ಯತೆ ಇರುವುದರಿಂದ ಮೂಟೆಗಟ್ಟಲೆ ಯೂರಿಯಾ ಬಳಕೆ ಅಗತ್ಯವಿಲ್ಲ.
ಬೆಳೆಯು ಮೂರು ಅಡಿ ಹಂತದಲ್ಲಿರುವಾಗ ಲದ್ದಿ ಹುಳು ಹತೋಟಿಗೆ ನಮೋರಿಯ (ಮೆಟಾರೈಜಿಯಂ) ರಿಲೈಜೈವಿಕ ಶಿಲೀಂಧ್ರ ನಾಶಕ ಬಳಸುವುದು ಸೂಕ್ತ ಹಾಗೂ ಕವಚ ಕೊಳೆ ರೋಗ ಬಾಧೆ ತಡೆಯಲು ಹೆಕ್ಸಾಕೊನಾಜೋಲ್ (1 ಮಿಲೀ. ಲೀ) ಸಿಂಪರಣೆ ಅನಿವಾರ್ಯ.
ಮುಂಗಾರು ಬಿಟಿ ಹತ್ತಿ: ಮಳೆ ಇಂದ ಕಾಪಾಡಲು ಕೆಲ ಉಪಕ್ರಮಗಳು
ಹೆಚ್ಚಾದ ಮಳೆ ನೀರು ಹೊರ ಹಾಕುವುದು. ದಿಂಡು, ಬೋದು ಏರಿಸುವ ಮೂಲಕ ಅತೀ ತೇವದ ಬಾಧೆಯಿಂದ ಬೆಳೆಯನ್ನು ರಕ್ಷಿಸಬೇಕು. ಬುಡ ಕೊಳೆ ರೋಗದ ಲಕ್ಷಣಗಳು ಕಂಡಲ್ಲಿ, ಕಾರ್ಬೆಂಡೆಜಿಂ 2 ಗ್ರಾಂ ದ್ರಾವಣವನ್ನು ಬೆಳೆಯ ಬುಡಕ್ಕೆ ಸಿಂಪರಿಸುವುದು. ಹೆಕ್ಸಾಕೊನಾಜೋಲ್ 1 ಮಿಲೀ ಶಿಲೀಂಧ್ರ ನಾಶಕದೊಡನೆ ಪೋಷಕಾಂಶಗಳ ಮಿಶ್ರಣ ಬೆರೆಸಿ ಸಿಂಪರಿಸುವುದರಿಂದ ಹೂವು ಕೊಳೆ ರೋಗ ಬಾಧೆ ಉಲ್ಬಣ ತಡೆಯಬಹುದು.
ಬಳಸಬೇಕಾದ ಪೋಷಕಾಂಶಗಳು, 19:19:19, 13:0:45 (ಅಥವಾ 0:52:34), ಲಘು ಪೋಷಕಾಂಶಗಳ ಮಿಶ್ರಣ ಪೋಷಕಾಂಶಗಳ ಸಿಂಪರಣೆಯನ್ನು ಪ್ರತಿಎರಡು ವಾರಗಳಿಗೊಮ್ಮೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆಯಬಹುದು.
ಬೆಳೆಗೆ ಪೋಷಕಾಂಶಗಳನ್ನು ಬೆಳೆಯ 50 ದಿನಗಳ ಹಂತದೊಳಗೆ, ಶಿಫಾರಿತ ಪ್ರಮಾಣದಲ್ಲಿ ಮಣ್ಣಿಗೆ ಒದಗಿಸಬೇಕು. ಜಿಪ್ಸಂ (100-200ಕೆಜಿ), ಜಿಂಕ್ (5 ಕೆಜಿ), ಬೋರಾನ್ (1 ಕೆಜಿ) ಮತ್ತು ಮೆಗ್ನೇಶಿಯಂ (5ಕೆಜಿ) (ಪ್ರಮಾಣ ಕೆಜಿ ಎಕರೆ) ಒದಗಿಸುವುದರಿಂದ ಉತ್ತಮ ಬೆಳೆ ಪಡೆಯಲು ಸಾಧ್ಯ.
ಗುಲಾಬಿ ಕಾಯಿ ಕೊರಕದ ಹತೋಟಿಗೆ ಇಮಾಮೆಕ್ಟಿನ್ ಬೆಂಜೋಯೇಟ್, ಕ್ಲೋರಂಟ್ರಿನಿಲಿಪೋಲ್, ಸ್ಪೈನೋಸ್ಯಾಡ್, ಸ್ಪೈನ್ಟೋರಂ ಇವುಗಳಲ್ಲಿ ಒಂದನ್ನು (ಪ್ರತಿ ಬಾರಿ ಬದಲಿಸುತ್ತ) ಬಳಸಬೇಕು. ಜೈವಿಕ ಪೀಡೆನಾಶಕ ಮೆಟಾರೈಜಿಯಂರಿಲೈನ್ನು ತಂಪು/ ಆದ್ರ್ರ ವಾತಾವರಣದಲ್ಲಿ ಬಳಸುವ ಮೂಲಕ ಸಹ ಕೀಟ ಹತೋಟಿಗೆ ಮುಂದಾಗುವುದು ಸೂಕ್ತ.
ಕಬ್ಬಿನಲ್ಲಿ ತುಕ್ಕು ರೋಗದ ಬಾಧೆ:
ಕಬ್ಬಿನ ಬೆಳೆಗೆ ತುಕ್ಕುರೋಗದ ಬಾಧೆಕಂಡು ಬಂದಿದೆ. ಈ ರೋಗವನ್ನು ನಿಯಂತ್ರಿಸಲು ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು. ರಾಸಾಯನಿಕ ಗೊಬ್ಬರಗಳ ಅದರಲ್ಲೂ ಸಾರಜನಕಯುಕ್ತ ರಸಗೊಬ್ಬರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ರಾಸಾಯನಿಕ ಕ್ರಮವಾಗಿ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಹೆಕ್ಸಾಕೋನಾಝೋಲ್ ಅಥವಾ 1 ಮಿ.ಲೀ. ಪ್ರೊಪಿಕೋನಾಝೋಲ್ ಅಥವಾ 1 ಮಿ.ಲೀ. ಟೆಬ್ಯುಕೋನಾಝೋಲ್ ಅಥವಾ 0.5 ಗ್ರಾಂ. ಟೆಬ್ಯುಕೋನಾಝೋಲ್ + ಟ್ರಿಫ್ಲಾಕ್ಸಿಸ್ಟ್ರೋಬಿನ್ (ನೇಟಿಮೋ) ಸಂಯುಕ್ತ ಶಿಲೀಂದ್ರನಾಶಕವನ್ನು ಸಿಂಪರಣೆ ಮಾಡಬೇಕು ಈ ಎಲ್ಲ ಉಪಕ್ರಮಗಳನ್ನು ರೈತರು ತಾವು ಬೆಳೆದ ಬೆಳೆಗಳಲ್ಲಿ ನಿರ್ವಹಿಸಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.