ಇಂದಿನಿಂದ ಮೂರು ದಿವಸಗಳ ಕಾಲ (ಜನವರಿ 6 ರಿಂದ 8 ರವರೆಗೆ) ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಸಮಾವೇಶವನ್ನು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಾವೇರಿ ಜಿಲ್ಲಾಡಳಿತ ವತಿಯಿಂದ ಜಂಟಿಯಾಗಿ ಆಯೋಜಿಸಲಾಗಿದೆ. ಸಮಾವೇಶವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸಮಾವೇಶದ ಅಧ್ಯಕ್ಷತೆಯನ್ನು ಕವಿ, ಸಾಹಿತಿಗಳಾದ ಪದ್ಮಶ್ರೀ ಡಾ|| ದೊಡ್ಡರಂಗೇಗೌಡ ಅವರು ವಹಿಸಲಿದ್ದಾರೆ. ಡಾ|| ದೊಡ್ಡರಂಗೇಗೌಡರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಡಾ|| ದೊಡ್ಡರಂಗೇಗೌಡರು ಚಲನಚಿತ್ರ ಗೀತ ಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ. ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ.
ಹಾವೇರಿ-ಹುಬ್ಬಳ್ಳಿ ರಸ್ತೆಯ ಶ್ರೀ ಅಜ್ಜಯ್ಯ ದೇವಸ್ಥಾನದ ಎದುರು ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಸಚಿವರಾದ ಸುನೀಲ್ ಕುಮಾರ್, ಬಿಸಿ ಪಾಟೀಲ್, ಬಿಸಿ ನಾಗೇಶ್, ಜಗದೀಶ್ ಶೆಟ್ಟರ್ ಮತ್ತಿತರರು ಉಪಸ್ಥಿತರಿರುತ್ತಾರೆ.
ಸಾಮರಸ್ಯದ ಭಾವ-ಕನ್ನಡದ ಜೀವ ವಿಚಾರಗೋಷ್ಠಿ, ಕವಿಗೋಷ್ಠಿ, ಪುಸ್ತಕ ಮೇಳ ಸೇರಿದಂತೆ ಕನ್ನಡ ನುಡಿ ಸಾಹಿತ್ಯಕ್ಕೆ ಕೊಡುಗೆಗಳನ್ನು ನೀಡಿರುವ ಸಾಧಕರಿಗೆ ಸನ್ಮಾನ ಸಮಾರಂಭ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ಕಳೆದ ಎರಡು ವರ್ಷಗಳ ಕಾಲ ಕರೋನಾ ಇದ್ದಿದ್ದ ಕಾರಣದಿಂದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿರಲಿಲ್ಲ. ಎರಡು ವರ್ಷಗಳ ನಂತರ ಆಯೋಜಿಸಲಾಗಿರುವ ಸಮಾವೇಶದಲ್ಲಿ ಭಾಗವಹಿಸಲು ಸಾಹಿತ್ಯ ಪ್ರಿಯರು ಉತ್ಸುಕರಾಗಿದ್ದಾರೆ.
1915 ರಿಂದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳವನ್ನು ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿದೆ. ಕನ್ನಡದ ಇತಿಹಾಸವನ್ನು ಪ್ರಚಾರಪಡಿಸುವುದು ಮತ್ತು ಭಾಷೆಯನ್ನು ಬೆಳೆಸುವುದು ಸಮ್ಮೇಳನದ ಮೂಲ ಉದ್ದೇಶವಾಗಿದೆ.