ದಾಂಡೇಲಿ ಹಳಿಯಾಳ ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರಿಗೆ ರೈಲು ಸಂಚರಿಸುವ ಸಂದರ್ಭದಲ್ಲಿ ರೈಲ್ವೆ ಗೇಟ್ ಬಂದ್ ಮಾಡುವ ಕಾರಣದಿಂದ ಕಾಯುವ ಬವಣೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.
ಧಾರವಾಡ ಹಳಿಯಾಳ ರಾಷ್ಟ್ರೀಯ ಹೆದ್ದಾರಿ ನಡುವಿನ ರೈಲ್ವೆ ಗೇಟ್ ನಂ. 299 ಮತ್ತು ನಂ. 300 ರ ರೈಲ್ವೆ ಕೆಳ ಸೇತುವೆ ನಿರ್ಮಾಣದ ಬಗ್ಗೆ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರೊಂದಿಗೆ ಸಂಸದರಾದ ಪ್ರಹ್ಲಾದ್ ಜೋಷಿ ಅವರು ಪ್ರಸ್ತಾಪಿಸಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ರೈಲ್ವೆ ಸಚಿವರು ಈ ಹಿಂದೆಯೇ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅನುಮೋದನೆ ನೀಡಿದ್ದರು.
ಇದೀಗ ಈ ಕಾಮಗಾರಿಗೆ ತಗಲುವ ಒಟ್ಟು ವೆಚ್ಚದ ಅರ್ಧದಷ್ಟು ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಲು ರಾಜ್ಯ ಮಂತ್ರಿಮಂಡಲದ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.
ಈ ಮೂಲಕ ಧಾರವಾಡ ಹಳಿಯಾಳ ರಸ್ತೆಯ ತಪೋವನ ಬಳಿ ಗೇಟ್ ನಂ 300 ರ ರೈಲ್ವೆ ಕೆಳಸೇತುವೆ (ಆರ್.ಯು.ಬಿ) ನಿರ್ಮಾಣಕ್ಕೆ ಶೇಕಡಾ 50ರಷ್ಟು ಅನುದಾನವನ್ನು ರಾಜ್ಯ ಸರಕಾರ ನೀಡಲಿದೆ.
ನೈರುತ್ಯ ರೈಲ್ವೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಎಲ್.ಸಿ ಗೇಟ್ ನಂ 299ರ ಆರ್.ಯು.ಬಿ ನಿರ್ಮಾಣಕ್ಕೆ ತಗಲುವ ₹41.59 ಕೋಟಿ ವೆಚ್ಚದ ಪೈಕಿ ಅರ್ಧದಷ್ಟು ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.
ಎಲ್.ಸಿ ಗೇಟ್ ನಂ 300ರ ಆರ್.ಯು.ಬಿ ನಿರ್ಮಾಣಕ್ಕೆ ಒಟ್ಟು ₹41.64 ಕೋಟಿ ವೆಚ್ಚವಾಗುತ್ತಿದ್ದು, ಅದರಲ್ಲಿ ₹20.57 ಕೋಟಿ ಈಗಾಗಲೇ ನೀಡಲಾಗಿದ್ದು, ಇನ್ನುಳಿದ ಮೊತ್ತವನ್ನು ರೈಲ್ವೆ ಇಲಾಖೆ ನೀಡಲಿದೆ.
ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಈ ಎರಡು ಕೆಳ ಸೇತುವೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗುತ್ತದೆ.
“ಧಾರವಾಡ ಹಳಿಯಾಳ ರಸ್ತೆಯಲ್ಲಿ ರೈಲ್ವೇ ಕೆಳಸೇತುವೆ ಕಾಮಗಾರಿ ಆರಂಭಿಸುವಂತೆ ಸ್ಥಳೀಯ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಅವರು ನಿರಂತರವಾಗಿ ನನ್ನ ಸಂಪರ್ಕದಲ್ಲಿದ್ದು, ಈ ಯೋಜನೆಯ ಕುರಿತು ಕಾಳಜಿ ವಹಿಸಿಕೊಂಡಿದ್ದರು” ಎಂದು ಪ್ರಹ್ಲಾದ್ ಜೋಷಿ ಅವರು ಹೇಳಿದರು.
ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಪ್ರಹ್ಲಾದ್ ಜೋಷಿ ಅವರು ಧನ್ಯವಾದ ತಿಳಿಸಿದ್ದಾರೆ.