14418 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಧಾರವಾಡ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಪ್ರಕಟಿಸಿರುವ 2023-24ನೇ ಆರ್ಥಿಕ ವರ್ಷದ 14418 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ನಿನ್ನೆ ನಡೆದ ಜಿಲ್ಲಾ ಸಲಹಾ ಹಾಗೂ ಪ್ರಗತಿ ಸಮಿತಿ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕರುಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಬ್ಯಾಂಕ್‍ಗಳಲ್ಲಿ ವಿವಿಧ ಇಲಾಖೆಗಳಿಂದ ಸಲ್ಲಿಸಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ಬಾಕಿಯಿರುವ ಫಲಾನುಭವಿಗಳ ಅರ್ಜಿ ಪ್ರಸ್ತಾವನೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ನಬಾರ್ಡ್ ಹೊರತಂದಿರುವ ಧಾರವಾಡ ಜಿಲ್ಲಾ ಆರ್ಥಿಕ ವರ್ಷದ 14418 ಕೋಟಿ ರೂ.ಗಳ ಸಾಲ ಯೋಜನೆಯಲ್ಲಿ ಬೆಳೆ ಸಾಲಕ್ಕೆ 3820 ಕೋಟಿ ರೂ. ಅವಧಿ ಸಾಲ 1118 ಕೋಟಿ ರೂ. ಕೃಷಿ ಸಂಪನ್ಮೂಲ ಕ್ಷೇತ್ರಕ್ಕೆ 3116 ಕೋಟಿ ರೂ. ಸಾಲ ಯೋಜನೆಯನ್ನು ರೂಪಿಸಿದೆ.

ಆಹಾರ ಸಂಸ್ಕರಣೆ ಹಾಗೂ ಇತರೆ ಕ್ಷೇತ್ರಕ್ಕೆ 9938 ಕೋಟಿ ಹಾಗೂ ಸಣ್ಣ ಅತೀಸಣ್ಣ ಕೈಗಾರಿಕೆ ಕ್ಷೇತ್ರಕ್ಕೆ 5893 ಕೋಟಿ ರೂ., ರಫ್ತು, ಶಿಕ್ಷಣ, ವಸತಿ ಕ್ಷೇತ್ರ ಸೇರಿದಂತೆ ಒಟ್ಟು 14418 ಕೋಟಿ ರೂ. ಸಾಲ 2023-24 ಕ್ಕೆ ಕ್ಷಮತೆ ವಾರ್ಷಿಕ ಸಾಲ ಯೋಜನೆ ನಬಾರ್ಡ್ ರೂಪಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪ್ರಧಾನಮಂತ್ರಿ ಫಸಲು ಬಿಮಾ, ಪ್ರಧಾನಮಂತ್ರಿ ಸ್ವನಿಧಿ, ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆ (ಪಿಎಂಎಫ್‍ಎಂಇ), ಪಶು ಸಂಗೋಪನೆ, ಮೀನುಗಾರಿಕೆ ಬೆಳೆಸಾಲ ಮನ್ನಾ, ಬೆಳೆವಿಮೆ ಸಾಮಾಜಿಕ ಭದ್ರತಾ ಯೋಜನೆಗಳು.

ಮುದ್ರಾ ಮತ್ತಿತರೆ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಸರಳವಾಗಿ ಅಧಿಕಾರಿಗಳು ಸೇವೆಗಳನ್ನು ನೀಡತಕ್ಕದ್ದು, ಖಾಲಿಯಿರುವ ಅರ್ಜಿ ಪ್ರಸ್ತಾವನೆಗಳನ್ನು ಶೀಘ್ರವೇ ಒಂದು ವಾರದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು.

ಆರ್ಥಿಕ ನೆರವಿನ ಯೋಜನೆಗಳಿಗೆ ಬ್ಯಾಂಕ್‍ಗಳು ವಿಳಂಬ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಜಿಲ್ಲಾ ಲೀಡ್‍ಬ್ಯಾಂಕ್ ಮುಖ್ಯ ವ್ಯವಸ್ಥಾಪಕರ ಮೂಲಕ ಬ್ಯಾಂಕ್ ಶಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಸಿಇಓ ಸುರೇಶ ಇಟ್ನಾಳ ಮಾತನಾಡಿ, ಸ್ವಸಹಾಯ ಗುಂಪುಗಳಿಗೆ ಕೆಲ ಬ್ಯಾಂಕ್‍ಗಳು ಸಭೆಯ ನಿರ್ಣಯಗಳು ಹಾಗೂ ಪಾನ್‍ಕಾರ್ಡ್ ತರುವಂತೆ ಒತ್ತಾಯಿಸುವುದು ಅಸಮಂಜಸ.

ಬ್ಯಾಂಕುಗಳು ಇಂಥ ಸಮಸ್ಯೆ ಮಾಡಬಾರದೆಂದರು. ವಿವಿಧ ಬ್ಯಾಂಕ್‍ಗಳಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮದ 2021 ಸಾಲಿನ 18 ಅರ್ಜಿ ಪ್ರಸ್ತಾವನೆಗಳು ಬಾಕಿಯಿವೆ. ಅಲೆಮಾರಿ ಜನಾಂಗದ 8 ಅರ್ಜಿಗಳು ಬಾಕಿಯಿವೆ.

ಅಲ್ಪಸಂಖ್ಯಾತ ಇಲಾಖೆಯ 36 ಅರ್ಜಿಗಳು ಬಾಕಿಯಿವೆ. ಸ್ವಉದ್ಯೋಗದ 26, ಲಿಡಕರ್ ನಿಗಮದ 20 ಅರ್ಜಿಗಳು ಬಾಕಿಯಿವೆಯೆಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಬ್ಯಾಂಕ್‍ಗಳು ಈ ರೀತಿ ವಿಳಂಬ ಮಾಡದೇ ಬಾಕಿಯಿರುವ ಅರ್ಜಿಗಳನ್ನು ಒಂದೇ ವಾರದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು.

Share this article!

Leave a Reply

Your email address will not be published. Required fields are marked *

error: Content is protected !!