ಜುಲೈ 3 ನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ

2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಯು ಜುಲೈ 3ನೇ ವಾರದಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದ್ದು, ಎಸ್‍ಎಸ್‍ಎಲ್‍ಸಿ  ಪರೀಕ್ಷೆಯನ್ನು ಜಿಲ್ಲೆಯಲ್ಲಿ ಸುರಕ್ಷಿತ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಅಗತ್ಯವಿರುವ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆ ಕುರಿತ ವೀಡಿಯೋ ಸಂವಾದದ ನಂತರ ಪೊಲೀಸ್, ಆರೋಗ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಜುಲೈ 3 ನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗೆ ನಡೆದ ವೀಡಿಯೋ ಸಂವಾದ

 ಜಿಲ್ಲೆಯಲ್ಲಿ ಒಟ್ಟು 413 ಪ್ರೌಢಶಾಲೆಗಳಿದ್ದು, ಅದರಲ್ಲಿ 119 ಸರ್ಕಾರಿ ಪ್ರೌಢಶಾಲೆಗಳು, 141 ಖಾಸಗಿ   ಅನುದಾನಿತ  ಪ್ರೌಢಶಾಲೆಗಳು ಮತ್ತು 153 ಅನುದಾನ ರಹಿತ ಪ್ರೌಢಶಾಲೆಗಳಿವೆ. 413 ಪ್ರೌಢಶಾಲೆಗಳ ಪೈಕಿ ಒಟ್ಟು 29,456 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಅವರು ಹೇಳಿದರು.

 ಪರೀಕ್ಷಾ ಕರ್ತವ್ಯ ನಿರ್ವಹಿಸುವ ಎಲ್ಲ ಶಿಕ್ಷಕರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಲಸಿಕೆ ನೀಡಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಬೇಕು. ಮತ್ತು ಅಗತ್ಯವಿದ್ದಲ್ಲಿ ಪಲ್ಸ್ ಆಕ್ಸಿಮೀಟರ್ ಸಹ ಬಳಸಬೇಕೆಂದು ಅವರು ಹೇಳಿದರು. 

ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಕುರಿತು ಸರ್ಕಾರ ನೀಡಿರುವ ಎಸ್‍ಓಪಿಯಲ್ಲಿ ತಿಳಿಸಿರುವ ಮಾರ್ಗಸೂಚಿಗಳನ್ನು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿಕೊಂಡು ಯಶಸ್ವಿಗೊಳಿಸಬೇಕು. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಮತ್ತು ಪರೀಕ್ಷಾ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಶಿಕ್ಷಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಬೇಕು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮಾಸ್ಕ್ ಮರೆತು ಬಂದಿದ್ದರೆ ಅವರಿಗೆ ಇಲಾಖೆಯಿಂದ ಮಾಸ್ಕ್ ನೀಡಬೇಕೆಂದು ಅವರು ತಿಳಿಸಿದರು. 

ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಯ ದಿನದಂದು ಪರೀಕ್ಷೆಗೆ ಮೊದಲು ಮತ್ತು ಪರೀಕ್ಷೆಯ ನಂತರ ಸ್ಯಾನಿಟೈಸ್ ಮಾಡಬೇಕು. ಪರೀಕ್ಷಾ ಕೇಂದ್ರದ ಒಳಬರುವ ಮತ್ತು ಹೊರಹೋಗುವ ಎಲ್ಲರ ಕೈಗಳಿಗೂ ಸ್ಯಾನಿಟೈಸ್ ನೀಡಬೇಕೆಂದು ಮತ್ತು ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸಿಇಓ ಡಾ. ಸುಶೀಲಾ ಬಿ. ತಿಳಿಸಿದರು.

 ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ:ಯಶವಂತ ಮದೀನಕರ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು. 

ಎಸ್.ಎಸ್.ಎಲ್.ಸಿ ಮಕ್ಳಳಿಗೆ ಸಹಾಯವಾಣಿ-18004256758: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ, ಭಯ ಮತ್ತು ಒತ್ತಡಗಳಿಗೆ ಒಳಗಾಗದೇ ಬರೆಯಲು ಮುಕ್ತ ವಾತಾವರಣ ನಿರ್ಮಿಸಲು ಸಹಾಯವಾಣಿ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. 

ಜಿಲ್ಲಾ ಹಂತದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಭಾನುವಾರ ಹೊರತುಪಡಿಸಿ ಪರೀಕ್ಷೆಯ ಹಿಂದಿನ ದಿನದವರೆಗೆ ಪ್ರತಿದಿನ ಮಧ್ಯಾಹ್ನ 2-30 ರಿಂದ 5 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.

ಪರೀಕ್ಷೆ ನಡೆಸಲು ತೆಗೆದುಕೊಂಡ ಕೋವಿಡ್-19 ಮಾರ್ಗಸೂಚಿಗಳು

161 ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಗಳಲ್ಲಿ ಮಂಡಳಿಯ ನಿರ್ದೇಶನದನ್ವಯ ಮಕ್ಕಳ ಸುರಕ್ಷತಾ ದೃಷ್ಟಿಯಿಂದ 12 ವಿಧ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಪೂರ್ವದಲ್ಲಿ ಎಲ್ಲ ಕೊಠಡಿಗಳನ್ನು ಸ್ಯಾನಿಟೈಜೇಷನ್ ಮಾಡಿ, ಕೇಂದ್ರಕ್ಕೆ ಹಾಜರಾಗುವ ವಿಧ್ಯಾರ್ಥಿಗಳು ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡಿ, ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಸ್ಯಾನಿಟೈಜರ್ ಪೂರೈಸಲಾಗುವುದು. 

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಐಸೋಲೆಷನ್ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕುಡಿಯುವ ನೀರನ್ನು ತಾವೇ ತರಲು ನಿರ್ದೇಶನ ನೀಡಲಾಗಿದೆ.   ಇಲಾಖೆಯ ನಿಯಮಾನುಸಾರ ವಿದ್ಯಾರ್ಥಿಗಳಿಗೆ ತಮಗೆ ಹತ್ತಿರವಿರುವ ಬೇರೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.  

ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆ ಕೇವಲ ಎರಡು ದಿನ: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಸಂಪೂರ್ಣ  ಬಹು ಆಯ್ಕೆ ಪ್ರಶ್ನೆಗಳಿಂದ ಕೂಡಿದೆ.  ಪ್ರತಿ ವಿಷಯಕ್ಕೆ  40 ಅಂಕಗಳಿದ್ದು,  ಒಂದು ಗಂಟೆಯ ಸಮಯ ನೀಡಲಾಗಿದೆ. 40 ಅಂಕಗಳನ್ನು 80 ಅಂಕಗಳಿಗೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನದ 20 ಅಂಕಗಳನ್ನು ಸೇರಿಸಿ ಒಟ್ಟು 625 ಅಂಕಗಳಿಗೆ ಮೌಲ್ಯಮಾಪನ ಮಾಡಲಾಗುತ್ತದೆ. 

 ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೇವಲ ಎರಡು ದಿನ ಮಾತ್ರ ನಡೆಯಲಿದ್ದು, ಮುಖ್ಯ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನು ಒಳಗೊಂಡ ಪತ್ರಿಕೆ-1 ಹಾಗೂ ಪ್ರಥಮ, ದ್ವಿತೀಯ, ತೃತೀಯ ಭಾಷೆಯನ್ನು ಒಳಗೊಂಡ ಪತ್ರಿಕೆ-2 ಇರುತ್ತವೆ. ಪ್ರತಿ ಪತ್ರಿಕೆಯು 120 ಅಂಕಗಳನ್ನು ಒಳಗೊಂಡಿದ್ದು, ಎಲ್ಲ ಪ್ರಶ್ನೆಗಳು ಬಹುಆಯ್ಕೆ ಮಾದರಿಯ ಪ್ರಶ್ನೆಗಳಾಗಿರುತ್ತವೆ. 

ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಶ್ರೇಣಿ ಮಾದರಿ ಫಲಿತಾಂಶ

10ನೇ ತರಗತಿಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎ+, ಎ, ಬಿ, ಸಿ ಶ್ರೇಣಿ ಮಾದರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. 90 ರಿಂದ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ+ ಶ್ರೇಣಿ, 80 ರಿಂದ 89 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ ಶ್ರೇಣಿ, 60 ರಿಂದ 79 ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿ ಶ್ರೇಣಿ ಮತ್ತು 35 ರಿಂದ 59 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಿ ಶ್ರೇಣಿ ನೀಡಲಾಗುತ್ತದೆ. 

ಶಿಕ್ಷಕರಿಗೆ ತಂತ್ರಜ್ಞಾನದ ತರಬೇತಿ : ಲಾಕ್‍ಡೌನ್ ಅವಧಿಯಲ್ಲಿ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ತಂತ್ರಜ್ಞಾನದ ತರಬೇತಿಯನ್ನು ಆಯೋಜಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ವೇಳಾಪಟ್ಟಿ ರೂಪಿಸಿಕೊಂಡು ಟೀಚ್‍ಮಿಂಟ್, ಸರ್ವೇ ಹಾರ್ಟ್, ಗೂಗಲ್ ಫಾರ್ಮ, ಕಹೂಟ್, ಜೋಡೋ ಮುಂತಾದ ತಂತ್ರಜ್ಞಾನದ ಕುರಿತು ತರಬೇತಿಯನ್ನು ನೀಡಲಾಗಿದೆ. ಈಗ ಪ್ರತಿ ಶಿಕ್ಷಕರು ಬೋಧನಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಮರ್ಥರಾಗಿದ್ದಾರೆ. 

ಕಲಿಕಾಸೇತು ಮತ್ತು ಮನನ ಮಂಥನ : ಜಿಲ್ಲೆಯಲ್ಲಿ ಈಗಾಗಲೇ ಕಲಿಕಾ ಸೇತು ಶೀರ್ಷಿಕೆಯಡಿ ಎರಡು ಪರೀಕ್ಷೆಗಳನ್ನು ಜಿಲ್ಲಾಮಟ್ಟದಲ್ಲಿ ಮಾಡಲಾಗಿದ್ದು, ಜುಲೈ 2 ಹಾಗೂ 5ರಂದು ಕಲಿಕಾಸೇತು-3 ಹೆಸರಿನ ಪೂರ್ವಸಿದ್ಧತಾ ಪರೀಕ್ಷೆಯನ್ನು ಪರೀಕ್ಷಾ ಮಂಡಳಿಯ ಮಾದರಿಯಲ್ಲಿಯೇ ನಡೆಸಲಾಗುತ್ತದೆ.  ಮನನ ಮಂಥನ ಶೀರ್ಷಿಕೆಯಡಿ ಜಿಲ್ಲಾಮಟ್ಟದಲ್ಲಿ 2 ಆನ್‍ಲೈನ್ ಕ್ವೀಜ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಜಿಲ್ಲೆಯ ಶೇ.65 ರಷ್ಟು ವಿದ್ಯಾರ್ಥಿಗಳು ಆಸಕ್ತಿಯಿಂದ ಸಕ್ರಿಯವಾಗಿ ಭಾಗವಹಿಸಿದ್ದಾರೆ. 

ಎಸ್‍ಎಸ್‍ಎಲ್‍ಸಿ ಗೆ 29,456 ವಿದ್ಯಾಥಿಗಳು: 2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಗೆ ಜಿಲ್ಲೆಯ ಒಟ್ಟು 29,456 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು ಹಾಜರಾಗಲಿದ್ದಾರೆ. ಹುಬ್ಬಳ್ಳಿ ಶಹರ ವ್ಯಾಪ್ತಿಯ 121 ಪ್ರೌಢಶಾಲೆಗಳ 8,768 ವಿದ್ಯಾರ್ಥಿಗಳು, ಧಾರವಾಡ ಶಹರ ವ್ಯಾಪ್ತಿಯ 90 ಪ್ರೌಢಶಾಲೆಗಳ 5,771 ವಿದ್ಯಾರ್ಥಿಗಳು, ಧಾರವಾಡ ಗ್ರಾಮೀಣ ವ್ಯಾಪ್ತಿಯ 43 ಪ್ರೌಢಶಾಲೆಗಳ 3,800 ವಿದ್ಯಾರ್ಥಿಗಳು,  ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯ 52 ಪ್ರೌಢಶಾಲೆಗಳ 3,802 ವಿದ್ಯಾರ್ಥಿಗಳು, ಕಲಘಟಗಿ ತಾಲೂಕು  ವ್ಯಾಪ್ತಿಯ 34 ಪ್ರೌಢಶಾಲೆಗಳ 2,650 ವಿದ್ಯಾರ್ಥಿಗಳು, ಕುಂದಗೋಳ ತಾಲೂಕು ವ್ಯಾಪ್ತಿಯ 37 ಪ್ರೌಢಶಾಲೆಗಳ 2,300 ವಿದ್ಯಾರ್ಥಿಗಳು ಮತ್ತು ನವಲಗುಂದ ತಾಲೂಕು ವ್ಯಾಪ್ತಿಯ 39 ಪ್ರೌಢಶಾಲೆಗಳ 2,365 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 29,456 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 

161 ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳು: ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಸುರಕ್ಷಿತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಒಟ್ಟು 161 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ 39,  ಧಾರವಾಡ ಶಹರ ವ್ಯಾಪ್ತಿಯಲ್ಲಿ 28,  ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ 22, ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯಲ್ಲಿ 23, ಕಲಘಟಗಿ ತಾಲೂಕು ವ್ಯಾಪ್ತಿಯಲ್ಲಿ 16, ಕುಂದಗೋಳ ತಾಲೂಕು ವ್ಯಾಪ್ತಿಯಲ್ಲಿ 15 ಮತ್ತು ನವಲಗುಂದ ತಾಲೂಕು ವ್ಯಾಪ್ತಿಯಲ್ಲಿ 18 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 161 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 

Share this article!

Leave a Reply

Your email address will not be published. Required fields are marked *

error: Content is protected !!