ಧಾರವಾಡ ಜಿಲ್ಲೆಯಲ್ಲಿ ಕಳೆದ ವಾರದಿಂದ ಮತದಾರರ ಪಟ್ಟಿಯಿಂದ ನಿಯಮಬಾಹಿರವಾಗಿ ಹೆಸರುಗಳನ್ನು ತೆಗೆದು ಹಾಕಲಾಗಿದೆ ಅಂತಾ ಮಾಧ್ಯಮಗಳಲ್ಲಿ ಸುದ್ದಿಯು ಪ್ರಕಟವಾಗಿರುತ್ತದೆ.
ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ (ERO/AERO) ಗಳಿಂದ ಕೂಲಂಕೂಷವಾಗಿ ಪರಿಶೀಲನೆ ಮಾಡಲಾಗುತ್ತಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವೇಳಾ ಪಟ್ಟಿಯಂತೆ ಪರಿಷ್ಕರಣೆ ನಡೆಯುತ್ತಿದೆ.
ದಿನಾಂಕ: 09-11-2022 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ದಿನಾಂಕ: 09-11-2022 ರಿಂದ ದಿನಾಂಕ: 08-12-2022ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಮತ್ತು ತೆಗೆದು ಹಾಕಲು ತಕರಾರು ಸಲ್ಲಿಸಲು ಅವಕಾಶವಿರುತ್ತದೆ.
ಈ ಬಗ್ಗೆ ಮತದಾರರ ನೋಂದಣಾಧಿಕಾರಿಗಳು ದಿನಾಂಕ:26-12-2022 ರೊಳಗಾಗಿ ಪರಿಶೀಲಿಸಿ ಇತ್ಯರ್ಥಪಡಿಸುವರು. ಈ ಪ್ರಕ್ರಿಯೆ ಪೂರ್ಣಗೊಳಿಸಿ ದಿನಾಂಕ:05-01-2023 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆಯಲ್ಲಿ ಡುಪ್ಲಿಕೇಟ್ ಎಂಟ್ರಿ, ಪೋಟೊ ಸಿಮಿಲರ್ ಎಂಟ್ರಿ, ಖಾಯಂ ಆಗಿ ಸ್ಥಳಾಂತರಗೊಂಡವರು, ಮರಣ ಹೊಂದಿದ ಮತದಾರರ ಹೆಸರುಗಳನ್ನು ಮಾತ್ರ ನಿಯಮಾನುಸಾರ ಪರಿಶೀಲಿಸಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ನಿಯಮ ಬಾಹಿರವಾಗಿ ಯಾವುದೇ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ (VHA App) ಬಳಸಿ, www.nvsp.inಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ https://ceo.karnataka.gov.in ಮೂಲಕ ವೋಟರ್ ಐಡಿ ನಮೂದಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕಾರ್ಯಾಲಯದ ಹೆಲ್ಪಲೈನ್ ನಂ. 1950ಕ್ಕೆ ಕರೆ ಮಾಡಬಹುದಾಗಿದೆ.
ಒಂದು ವೇಳೆ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿದ್ದಲ್ಲಿ ಅರ್ಜಿ ನಮೂನೆ 6 ನ್ನು ಭರ್ತಿಮಾಡಿ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ.
ಆದ್ದರಿಂದ ಯಾರೂ ಈ ಬಗ್ಗೆ ಗೊಂದಲಕ್ಕೆ ಒಳಗಾಗಬಾರದೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.