ನ್ಯಾಯಾಲಯಗಳ ನ್ಯಾಯಾಧೀಶರಿಗೆ ಮತ್ತು ನ್ಯಾಯಾಂಗಿಯ ಅಧಿಕಾರಿಗಳಿಗೆ ಮಧ್ಯಸ್ಥಿಕೆ ಕುರಿತು ಒಂದು ದಿನದ ಪುನರ್ ಮನನ ತರಬೇತಿ ಕಾರ್ಯಾಗಾರವನ್ನು ನಿನ್ನೆ ಆಯೋಜಿಸಲಾಗಿತ್ತು.
ನ್ಯಾಯಾಂಗದ ಅಂಗಳದಲ್ಲಿ ಮಧ್ಯಸ್ಥಿಕೆಗೆ ಅವಕಾಶ ಕಲ್ಪಿಸಿರುವುದು ನಮ್ಮ ಸಂವಿಧಾನ ಮತ್ತು ನ್ಯಾಯಾಂಗದ ವಿಶಿಷ್ಠವಾದ ಲಕ್ಷಣವಾಗಿದೆ.
ಮಧ್ಯಸ್ಥಿಕೆ ಮಾಡಲು ತಿರ್ಪುಗಾರರಿಗೆ ಮಾನವೀಯತೆ ಗುಣ ಬಹುಮುಖ್ಯ. ಇದರಿಂದ ಸಾಕಷ್ಟು ಪ್ರಕರಣಗಳು ಸುಖಾಂತ್ಯ ಕಾಣಲು ಸಾಧ್ಯವಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಎಸ್.ಸುನಿಲ್ ದತ್ತ ಯಾದವ ಅವರು ಹೇಳಿದರು.
ಅವರು ಧಾರವಾಡ ಮತ್ತು ಗದಗ ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಮತ್ತು ನ್ಯಾಯಾಂಗಿಯ ಅಧಿಕಾರಿಗಳಿಗೆ ಮಧ್ಯಸ್ಥಿಕೆ ಕುರಿತು ಆಯೋಜಿಸಿದ್ದ ಒಂದು ದಿನದ ಪುನರ್ ಮನನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಕಾನೂನು ಸೇವಾ ಸಮಿತಿ, ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಧಾರವಾಡ, ಗದಗ ಜಿಲ್ಲಾ ನ್ಯಾಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅದು ಮಧ್ಯಸ್ಥಿಕೆಯಿಂದ ಪರಿಹರಿಸಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಮಧ್ಯಸ್ಥಿಕೆಯು ಒಂದು ಸಾಧನ. ಎರಡು ಕಡೆಯ ಕಕ್ಷಿದಾರರ ಬೇಡಿಕೆ ಅರ್ಥೈಸಿಕೊಂಡು, ಸೂಕ್ತ ತಿಳುವಳಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡಬೇಕೆಂದು ಅವರು ಹೇಳಿದರು.
ಮಧ್ಯಸ್ಥಿಕೆಗೆ ಕುಳಿತಾಗ ನ್ಯಾಯಾಧೀಶರು ತಮ್ಮ ಕಲಿತ ಕಾನೂನು ಮತ್ತು ಪಡೆದ ಜ್ಞಾನವನ್ನು ಬಳಸಿಕೊಂಡು, ಪರಸ್ಪರ ಕಕ್ಷಿದಾರರಿಗೆ ಸೂಕ್ತ ತಿಳುವಳಿಕೆ ನೀಡಬೇಕು.
ಮದ್ಯಸ್ಥಿಕೆಗೆ ಅರ್ಹವಾದ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಧೀಶರು ದಿನನಿತ್ಯದ ಕೋರ್ಟ್ದಂತೆ ಇರದೆ, ಸ್ವಲ್ಪ ಆತ್ಮೀಯತೆ ಮತ್ತು ಅಗತ್ಯ ತಿಳುವಳಿಕೆ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವತ್ತ ಗಮನಹರಿಸಬೇಕೆಂದು ಅವರು ಹೇಳಿದರು.
ಮಧ್ಯಸ್ಥಿಕೆ ಕಾರ್ಯದಲ್ಲಿ ಕಾನೂನು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ, ತಿಳುವಳಿಕೆ ಸಿಗುತ್ತದೆ.
ಇದರಿಂದ ಮಧ್ಯಸ್ಥಿಕೆ ಕಾರ್ಯವ್ಯಾಪ್ತಿ ಹೆಚ್ಚುತ್ತದೆ ಮತ್ತು ಜನರಿಗು ತಲುಪುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಇನ್ನೊರ್ವ ನ್ಯಾಯಮೂರ್ತಿ ಜಿ.ಬಸವರಾಜ ಮಾತನಾಡಿ, ಪರಿಣಾಮಕಾರಿ ಮಧ್ಯಸ್ಥಿಕೆಯಿಂದ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತದೆ.
ಸಮಯದ ಉಳಿತಾಯವಾಗುತ್ತದೆ. ಮತ್ತು ಮಹತ್ವದ ಪ್ರಕರಣಗಳ ಕುರಿತು ಹೆಚ್ಚು ಅಧ್ಯಯನ, ಪ್ರಕರಣಗಳ ತ್ವರಿತ ವಿಲೇವಾರಿಗೆ ಸಹಾಯವಾಗುತ್ತದೆ ಎಂದರು.
ನ್ಯಾಯಮೂರ್ತಿ ಎಸ್.ರಾಚಯ್ಯ, ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ರಿಜಿಸ್ಟ್ರಾರ್ ಮತ್ತು ಉ.ನ್ಯಾ.ಧಾರವಾಡ ಪೀಠದ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ವೆಂಕಟೇಶ ಆರ್. ಹುಲಗಿ, ಗದಗ ಜಿಲ್ಲಾ ನ್ಯಾಯಾಲಯದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಬಸವರಾಜ, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ರಾಜ್ಯ ತರಬೇತಿ ದಾರರಾದ ಸುಧಾ.ಎಸ್.ಎನ್. ಮತ್ತು ವೈಶಾಲಿ ಹೆಗಡೆ ವೇದಿಕೆಯಲ್ಲಿದ್ದರು.
ಧಾರವಾಡ ಜಿಲ್ಲಾ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಂ.ಪುಷ್ಪಲತ ವಂದಿಸಿದರು. ನ್ಯಾಯಾಧೀಶೆ ನಿಲಂ ಅಚ್ಯುತರಾವ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಗದಗ ಮತ್ತು ಧಾರವಾಡ ಜಿಲ್ಲೆಗಳ ಜಿಲ್ಲಾ ನ್ಯಾಯಾಲಯಗಳ ನ್ಯಾಯಾದೀಶರು, ಮಧ್ಯಸ್ಥಿಕೆ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.