ಸಂಗೀತ ಹಾಗೂ ಕಲೆಗೆ ಯಾವುದೇ ಪ್ರದೇಶ ಸೀಮಿತವಾಗಿಲ್ಲ, ಸಮಾಜವನ್ನು ತಿದ್ದಿ ಸರಿಪಡಿಸುವ ಮತ್ತು ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸುವ ಶಕ್ತಿ ಕಲೆಗೆ ಇದೆ ಎಂದು ಕೇಂದ್ರ ಲಲಿತ ಕಲಾ ಅಕಾಡಮಿ ಅಧ್ಯಕ್ಷ ಡಾ. ಉತ್ತಮ ಪಚರ್ಣೆ ಹೇಳಿದರು.
ಅವರು ಇಂದು ಬೆಳಿಗ್ಗೆ, ಹುಬ್ಬಳ್ಳಿ– ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕೇಂದ್ರ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಲು ಅಕಾಡಮಿ ಸದಸ್ಯರ ಹಾಗೂ ಅಧಿಕಾರಿಗಳ ತಂಡದೊಂದಿಗೆ ಆರ್ಟ್ ಗ್ಯಾಲರಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಂತರ ಮಾತನಾಡಿದರು.
ಚಿತ್ರಪಟಗಳನ್ನು ಕೇವಲ ಗೋಡೆಗಳನ್ನು ಸಿಂಗರಿಸಲು ಜನರು ತೆಗೆದುಕೊಳ್ಳುತ್ತಾರೆ. ಆದರೆ ಆ ಚಿತ್ರದ ಒಳಾರ್ಥ ಕೇವಲ ಕಲಾವಿದರಿಗೆ ಅರ್ಥವಾಗುತ್ತದೆ. ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಶಕ್ತಿ ಕಲೆಗೆ ಇದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಅಪೇಕ್ಷೆಯಂತೆ ಕೇಂದ್ರ ಲಲಿತ ಕಲಾ ಅಕಾಡಮಿಯ ಪ್ರಾದೇಶಿಕ ಕೇಂದ್ರವನ್ನು ಹುಬ್ಬಳ್ಳಿ -ಧಾರವಾಡದಲ್ಲಿ ಸ್ಥಾಪಿಸಲು ಸ್ಥಳ ಪರಿಶೀಲಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಶಾಸಕ ಅರವಿಂದ ಬೆಲ್ಲದ ಅವರು ಭೇಟಿ ನೀಡಿ, ಸಿವಿಲ್ ಕೋರ್ಟ್ ಎದುರಿಗಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದ ಜಾಗೆಯನ್ನು ಪರಿಶೀಲನೆ ತಂಡಕ್ಕೆ ಪರಿಚಯಿಸಿ, ಅನುಕೂಲತೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಲಲಿತಕಲಾ ಅಕಾಡೆಮಿ ಕಾರ್ಯದರ್ಶಿ ರಾಮಕೃಷ್ಣ ವೇದಾಳ, ಉಪ ವಿಭಾಗಾಧಿಕಾರಿ ಗೋಪಾಲಕೃಷ್ಣ ಬಿ., ತಹಶೀಲ್ದಾರ ಸಂತೋಷ ಬಿರಾದರ ಹಾಜರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಹಿರಿಯ ಕಲಾವಿದರಾದ ಡಾ. ಬಿ.ಎಚ್. ಕುರಿಯವರ, ಎಸ್.ಕೆ.ಪತ್ತಾರ, ಡಿ.ಎಮ್.ಬಡಿಗೇರ, ಬಿ.ಮಾರುತಿ, ಶ್ರೀನಿವಾಸ ಶಾಸ್ತ್ರೀ, ಶಿವಕುಮಾರ ಮುಂತಾದವರು ಉಪಸ್ಥಿತರಿದ್ದರು.