ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಬರುವ ಜನವರಿ 6,7 ಮತ್ತು 8 ರಂದು ಹಾವೇರಿಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ಯ ಕನ್ನಡದ ಕಂಪಿನ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥವು ನಿನ್ನೆ ಸಂಜೆ ಧಾರವಾಡ ನಗರಕ್ಕೆ ಆಗಮಿಸಿತ್ತು.
ನಗರದ ಟೋಲ್ ನಾಕಾ ಹತ್ತಿರ ಧಾರವಾಡ ಜಿಲ್ಲಾ ಆಡಳಿತದಿಂದ ತಹಸಿಲ್ದಾರ ಸಂತೋಷ ಹಿರೇಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರ ನೇತೃತ್ವದಲ್ಲಿ ಕನ್ನಡದ ರಥವನ್ನು ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕನ್ನಡ ಜ್ಯೋತಿ ಇರುವ ಕನ್ನಡ ರಥವು ಡಿಸೆಂಬರ್ 1 ರ ಗುರುವಾರದಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಿಂದ ಹೊರಟಿದ್ದು, ಇಂದು ಜಿಲ್ಲೆಯ ಕಲಘಟಗಿ ತಾಲೂಕಿನ ಮೂಲಕ ಧಾರವಾಡ ಜಿಲ್ಲೆಯನ್ನು ಪ್ರವೇಶಿಸಿತು.
ಕಲಘಟಗಿ ತಹಸಿಲ್ದಾರ ಯಲ್ಲಪ್ಪ ಗೊಣೆನ್ನವರ ಮತ್ತು ಕನ್ನಡ ಸಂಘಟನೆಗಳು ಇಂದು ಮಧ್ಯಾಹ್ನ ಕನ್ನಡ ರಥದ ಪೂಜೆಯೊಂದಿಗೆ ಜಿಲ್ಲೆಯ ಗಡಿಯಲ್ಲಿ ಬರಮಾಡಿಕೊಂಡರು.
ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ರಥವು ಟೊಲನಾಕಾದಿಂದ ಕೋರ್ಟ್ ವೃತ್ತ, ಆಲೂರು ವೆಂಕಟರಾವ್ ವೃತ್ತ, ಕಾಲೇಜ ರೋಡ್ ಮೂಲಕ ಆರ್.ಎನ್.ಶೆಟ್ಟಿ ಕ್ರೀಡಾಂಗಣ ಹತ್ತಿರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಲುಪಿತು.
ನಂತರ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರ ನೇತ್ರತ್ವದಲ್ಲಿ ಜಿಲ್ಲಾ ಪದಾಧಿಕಾರಿಗಳು, ಸಾಹಿತಿಗಳು, ಸಂಘಟನೆಗಳ ಸದಸ್ಯರು ಮಾಲಾರ್ಪಣೆ ಮಾಡಿ, ಕನ್ನಡ ರಥಕ್ಕೆ ಗೌರವ ಸಲ್ಲಿಸಿದರು.
ಕನ್ನಡ ರಥವು ಇಂದು (ಡಿಸೆಂಬರ್ ೩) ಬೆಳಿಗ್ಗೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣಕ್ಕೆ ತೆರಳುತ್ತದೆ.
2023ರ ಜ.6, 7 ಹಾಗೂ 8ರಂದು ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕನ್ನಡ ರಥದ ಜಾಥಾ, ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಹಾವೇರಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಲಿದೆ.
ಕನ್ನಡ ರಥವು ಕನ್ನಡ ಸಾಹಿತ್ಯ ಸೇವಕ ನಭಿಸಾಭ ಕುಷ್ಟಗಿ ಅವರ ನೇತೃತ್ವದಲ್ಲಿ ಕನ್ನಡ ರಥವು ರಾಜ್ಯದಾದ್ಯಂತ ಸಂಚರಿಸುತ್ತಿದೆ.