ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅನುದಾನದಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಅದರ ಅಂಗವಾಗಿ ನಿನ್ನೆ ಶ್ರವಣಯಂತ್ರ ಗಳನ್ನು ವಿತರಿಸಲಾಯಿತು.
ನಿನ್ನೆ ಕಿಮ್ಸ್ ನ ಗೋಲ್ಡನ್ ಜುಬ್ಲಿ ಹಾಲ್ ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಕಿಮ್ಸ್ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿಯ ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಶ್ರವಣಯಂತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ಪಾಲಿಕೆಯಿಂದ ಪ್ರಥಮ ಬಾರಿಗೆ ಶ್ರವಣಯಂತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಾಲಿಕೆಯು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ.
ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ದಾನಿಗಳು 3 ಶವ ವಾಹನಗಳನ್ನು ಪಾಲಿಕೆಗೆ ನೀಡುತ್ತಿದ್ದಾರೆ. ಅವುಗಳನ್ನು ಪಾಲಿಕೆಯಿಂದ ನಿರ್ವಹಿಸಲಾಗುವುದು ಎಂದರು.
ಕಿಮ್ಸ್ ನ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಥಾನಿ ಮಾತನಾಡಿ, ರೂ.50 ಲಕ್ಷ ಅನುದಾನದಲ್ಲಿ ಶ್ರವಣಯಂತ್ರಗಳನ್ನು ಫಲಾನುಭವಿಗಳಿಗೆ ನೀಡುತ್ತಿರುವುದು ಸಂತಸ ತಂದಿದೆ.
ಕಿಮ್ಸ್ ಸಂಸ್ಥೆಯ ಅಭಿವೃದ್ಧಿಗೆ ಪಾಲಿಕೆ ಸಹಕರಿಸುತ್ತಿದೆ. ಮೈಸೂರು ಮಹಾನಗರ ಪಾಲಿಕೆಯು ಶ್ರವಣಯಂತ್ರ ವಿತರಿಸುವ ಕಾರ್ಯಕ್ಕೆ ಮುನ್ನುಡಿಯನ್ನು ಬರೆದಿತ್ತು. ಈಗ ಕಿಮ್ಸ್ ನಲ್ಲಿಯೂ ಕೂಡ ಈ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ ಮಾತನಾಡಿ, ರಾಜ್ಯ ಹಣಕಾಸು ಆಯೋಗ (ಸ್ಟೇಟ್ ಫೈನಾನ್ಷಿಯಲ್ ಕಮೀಷನ್) ನ ಶೇ. 5 ರಷ್ಟು ಅನುದಾನದಲ್ಲಿ ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡಲಾಗುತ್ತಿದೆ.
ರೂ. 50 ಲಕ್ಷ ವೆಚ್ಚದಲ್ಲಿ 75 ಫಲಾನುಭವಿಗಳಿಗೆ ಶ್ರವಣಯಂತ್ರ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಪಾಲಿಕೆಯಿಂದ ವಿಕಲಚೇತನರಿಗೆ ವಿವಿಧ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲಾಗಿದೆ. ಫಲಾನುಭವಿಗಳು ಶ್ರವಣಯಂತ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ 75 ಫಲಾನುಭವಿಗಳಿಗೆ ಶ್ರವಣ ಯಂತ್ರಗಳನ್ನು ವಿತರಿಸಲಾಯಿತು.
ಪಾಲಿಕೆ ಉಪಮೇಯರ್ ಉಮಾ ಮುಕುಂದ, ಪಾಲಿಕೆಯ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ, ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಾನಂದ ಮೆಣಸಿನಕಾಯಿ, ಪಾಲಿಕೆ ಸದಸ್ಯೆ ರೂಪಾಶೆಟ್ಟಿ ಹಾಜರಿದ್ದರು.
ಕಿಮ್ಸ್ ನ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ, ವೈದ್ಯಕೀಯ ಉಪ ಅಧೀಕ್ಷಕ ಡಾ.ರಾಜಶೇಖರ ದ್ಯಾಬೇರಿ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಸುರೇಶ ಬೆದರೆ, ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ತಲವಾರ ಸೇರಿದಂತೆ ಶ್ರವಣಶಾಸ್ತ್ರ ವಿಭಾಗದ ಸಿಬ್ಬಂದಿ, ಪಾಲಿಕೆಯ ಅಧಿಕಾರಿಗಳು, ಸಾರ್ವಜನಿಕರು, ಇತರರು ಉಪಸ್ಥಿತರಿದ್ದರು.
ಕಣ್ಣು, ಮೂಗು ಮತ್ತು ಕಿವಿ ( ಇ.ಎನ್. ಟಿ ) ವಿಭಾಗದ ಮುಖ್ಯಸ್ಥ ರವೀಂದ್ರ ಗದಗ ಸ್ವಾಗತಿಸಿದರು. ಅಂಕಿತಾ ಎಂ ನಿರೂಪಿಸಿದರು. ಜೊಹ್ರಾ ವಂದಿಸಿದರು.