ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಆದ್ಯ ಕರ್ತವ್ಯ. ಅದನ್ನು ಕಡೆಗಣಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರು ಎಚ್ಚರಿಕೆ ನೀಡಿದರು.
ಅವರು ಇಂದು ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ಲ ಸರ್ಕಾರಿ ಪ್ರೌಢ ಶಾಲೆಗೆ ದಿಢೀರ ಭೇಟಿ ನೀಡಿ ಶಾಲಾ ವ್ಯವಸ್ಥೆ, ಪರಿಸರ, ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ, ಶಿಕ್ಷಕರೊಂದಿಗೆ ತರಗತಿಯಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲಿಸಿದರು.
ಶಾಲಾ ಆವರಣದಲ್ಲಿನ ಅಸಮರ್ಪಕ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಪರ ಆಯುಕ್ತರು, ಕೂಡಲೇ ಶಾಲಾ ಆವರಣ ಸೇರಿದಂತೆ ಶಾಲಾ ಪರಿಸರವನ್ನು ಸ್ವಚ್ಛ ಹಾಗೂ ಸುಂದರಗೊಳಿಸಬೇಕು.
ಮಕ್ಕಳಿಗೆ ಅವಶ್ಯವಿರುವ ಶೌಚಾಲಯ, ಆಟದ ಮೈದಾನವನ್ನು ಶುಚಿಯಾಗಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮಜರುಗಿಸುವುದು ಅನಿವಾರ್ಯವಾಗುತ್ತದೆ.
ಈ ಶಾಲೆಯ ಸಮಗ್ರ ವ್ಯವಸ್ಥೆಯ ಕುರಿತು ಎರಡು ದಿನಗಳೊಳಗಾಗಿ ವರದಿ ನೀಡಲು ಸ್ಥಳದಲ್ಲಿ ಹಾಜರಿದ್ದ, ಉಪನಿರ್ದೇಶಕರಿಗೆ ಅಪರ ಆಯುಕ್ತರು ಸೂಚಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಾನವೀಯ ಮೌಲ್ಯ ಹಾಗೂ ಉತ್ತಮ ಸಂಸ್ಕಾರ ನೀಡಲು ಶಿಕ್ಷಕರು ಆಸಕ್ತಿ ವಹಿಸಬೇಕು.
ಮಕ್ಕಳ ಸರ್ವಾಂಗೀಣ ಏಳಿಗೆಗೆ ಶಿಕ್ಷಕರು ಶ್ರದ್ಧೆಯಿಂದ ಶ್ರಮಿಸಬೇಕೆಂದು ಶಾಲಾ ಶಿಕ್ಷಕರಿಗೆ ತಿಳಿಸಿದರು.
ಅಪರ ಆಯುಕ್ತರೊಂದಿಗೆ ಕುಸುಗಲ್ಲ ಗ್ರಾಮ ಪಂಚಾಯತ ಅಧ್ಯಕ್ಷರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಸ್ ಎಸ್ ಕೆಳದಿಮಠ, ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಶೋಕ ಸಿಂದಗಿ ಸೇರಿದಂತೆ ಗ್ರಾಮದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.