ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹುಬ್ಬಳ್ಳಿ ತಹಶೀಲ್ದಾರ ಕಚೇರಿಗೆ ನಿನ್ನೆ ಭೇಟಿ ನೀಡಿ ವಿವಿಧ ಶಾಖೆಗಳ ಕಾರ್ಯ ಪ್ರಗತಿ ಪರಿಶೀಲಿಸಿದರು.
ಸಾರ್ವಜನಿಕರಿಂದ ಮನೆ ಪರಿಹಾರ, ಪಿಂಚಣಿ, ಬೆಳೆ ಹಾನಿ ಪರಿಹಾರ, ಜಮೀನು ರಸ್ತೆ, ಶಿರಗುಪ್ಪಿ ರುದ್ರಭೂಮಿ ಸಮಸ್ಯೆ ಸೇರಿದಂತೆ ವಿವಿಧ ಕುಂದು ಕೊರತೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಿದರು.
ಶಿರಗುಪ್ಪಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಎರಡೂವರೆ ಎಕರೆ ಪ್ರದೇಶದಲ್ಲಿ ರುದ್ರಭೂಮಿಯಿದೆ. ಹಳ್ಳದ ಪಕ್ಕದಲ್ಲಿ ರುದ್ರಭೂಮಿಯಿದ್ದು, ಪ್ರವಾಹ ಬಂದಾಗ ಸಮಸ್ಯೆ ಉಂಟಾಗುತ್ತಿದೆ.
ಅಲ್ಲದೇ ಸುಮಾರು 200 ಎಕರೆಗೂ ಹೆಚ್ಚು ಹೊಲಗಳಿಗೆ ನೀರು ನುಗ್ಗಿ ಬೆಳೆಹಾನಿ ಉಂಟಾಗುತ್ತಿದೆ. ಈ ಕೂಡಲೇ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು.
ಸಮಸ್ಯೆಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಚರ್ಚಿಸಿದರು.
ಕೋಳಿವಾಡ ಗ್ರಾಮದಲ್ಲಿ ಹೊಲಗಳಿಗೆ ತೆರಳಲು ರಸ್ತೆ ಇರುವುದಿಲ್ಲ ಎಂದು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ಈ ಬಗ್ಗೆ ತಹಸೀಲ್ದಾರ ಪ್ರಕಾಶ ನಾಶಿ ಅವರು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಇ- ಆಸ್ತಿ ನೋಂದಣಿ ಮಾಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದ್ದು, ಈ ಕುರಿತು ಪರಿಶೀಲಿಸಲಾಗುವುದು.
ಇನ್ನೂ ಧಾರವಾಡ ಉತ್ಸವ ನಡೆಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪಿಂಚಣಿ, ಬೆಳೆ ಹಾನಿ ಪರಿಹಾರ, ವಾರಸಾ ಅರ್ಜಿಗಳ ಅಹವಾಲುಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು.
ಹುಬ್ಬಳ್ಳಿ ತಹಶೀಲ್ದಾರ ಪ್ರಕಾಶ ನಾಶಿ, ಕಂದಾಯ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಮಗಳ ಗ್ರಾಮಸ್ಥರು, ಇತರರು ಹಾಜರಿದ್ದರು.