ಧಾರವಾಡ-ಅಳ್ನಾವರ-ರಾಮನಗರ ರಾಜ್ಯ ಹೆದ್ದಾರಿ- ೩೪ ರಲ್ಲಿ ಕೆಲಗೇರಿ ಸಮೀಪದ ಎಲ್.ಸಿ ಗೇಟ ನಂ- ೩೦೫ ಹಾಗೂ ಕೊಗಿಲಗೇರಿ ಸಮೀಪದ ಎಲ್.ಸಿ ಗೇಟ ನಂ- ೩೧೬ – ಈ ಎರಡು ಸ್ಥಳಗಳಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕಾರ್ಯಕ್ಕೆ ಆರ್ಥಿಕ ಇಲಾಖೆಯಿಂದ ಚಾಲನೆ ನೀಡಲಾಗಿದೆ.
ಕೆಲಗೇರಿ ಹಾಗೂ ಕೊಗಿಲಗೇರಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಕುರಿತು ಕಲಘಟಗಿ ಕ್ಷೇತ್ರದ ಶಾಸಕರಾದ ಶ್ರೀ ಸಿ ಎಮ್ ನಿಂಬಣ್ಣವರ ಅವರು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಅವರಲ್ಲಿ ವಿನಂತಿಸಿದ್ದರು.
ಈ ಕುರಿತು ಮಂತ್ರಿಯವರು ಹಣ ಬಿಡುಗಡೆಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ೨೮.೩೧ ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಗೆ ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.
ಈ ಕಾಮಗಾರಿಗೆ ಬೇಕಾದ ತನ್ನ ಪಾಲಿನ ೫೦% ಹಣ (೧೪.೧೫ ಕೋಟಿ) ರೂ ಗಳನ್ನು ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಯಿಂದ ೫೦% ರೂ. ೧೪.೧೫ ಕೋಟಿ ಹಣ ನೀಡುವುದಾಗಿ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಇದಲ್ಲದೇ ಧಾರವಾಡ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಿಂದ ಹಳಿಯಾಳ – ಧಾರವಾಡ ರಸ್ತೆಯ ತಪೋವನ ಹತ್ತಿರದ ರೈಲ್ವೆ ಗೇಟ ನಂ- ೩೦೦ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ರೈಲ್ವೆ ಗೇಟ ನಂ- ೨೯೯ ಈ ಎರಡು ಗೇಟಗಳಲ್ಲಿ ರಸ್ತೆ ಮೇಲ್ಸೆತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಸೂಚಿಸಿದ್ದಾರೆ.
ತಪೋವನ ಹತ್ತಿರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ರೈಲ್ವೆ ಗೇಟ ನಂ- ೨೯೯ರಲ್ಲಿ ಮೇಲ್ಸೆತುವೆ ನಿರ್ಮಾಣ ಮಾಡುವುದು ಧಾರವಾಡ ನಾಗರಿಕರ ಬಹುದಿನದ ಬೇಡಿಕೆಯಾಗಿದೆ.
ಕರ್ನಾಟಕ ಸರ್ಕಾರದ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅವರಿಗೆ ಈ ಕಾರ್ಯಕ್ಕೆ ತಗಲುವ ೫೦% ವೆಚ್ಚವನ್ನು ಭರಿಸುವಂತೆ ಕೋರಿದ್ದಾರೆ.
ರೈಲ್ವೆ ಇಲಾಖೆಗೆ ಅಂದಾಜು ಪತ್ರಿಕೆ ಹಾಗೂ ಜಿ.ಎ.ಡಿ ಅನ್ನು ತಯಾರಿಸಿ ಕೂಡಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಮಂತ್ರಿಗಳು ಸೂಚಿಸಿದರು.
ಈ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸುವಲ್ಲಿ ಕ್ರಮ ಕೈಗೊಳ್ಳಲು ಪ್ರಹ್ಲಾದ್ ಜೋಷಿ ಅವರು ವಿನಂತಿಸಿದ್ದಾರೆ.