ಧಾರವಾಡ ಜಿಲ್ಲೆಯಲ್ಲಿ ಎರಡು ಓಮಿಕ್ರಾನ್ ಪ್ರಕರಣ ದೃಢ


ಧಾರವಾಡ ಜಿಲ್ಲೆಯಲ್ಲಿ ಇಂದು ಎರಡು ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತ 53 ವರ್ಷದ ಮಹಿಳೆ ಹಾಗೂ 14 ವರ್ಷದ ಬಾಲಕಿಗೆ ಈಗಾಗಲೇ ಅಗತ್ಯ ಚಿಕಿತ್ಸೆ ನೀಡಿ ಹೋಂ ಐಸೋಲೇಷ್‍ನ್‍ದಲ್ಲಿ ಚಿಕಿತ್ಸೆಯೊಂದಿಗೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಹುಬ್ಬಳ್ಳಿ ನಿವಾಸಿಗಳಾದ 53 ವರ್ಷದ ಮಹಿಳೆ ಮತ್ತು 14 ವರ್ಷದ ಬಾಲಕಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 395 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅವರೆಲ್ಲರಲ್ಲೂ ನೆಗೆಟಿವ್ ಬಂದಿದ್ದರಿಂದ ಇವರಿಬ್ಬರಿಗೆ ಮಾತ್ರ ಅಗತ್ಯ ಚಿಕಿತ್ಸೆ ನೀಡಿ ಹೋಂ ಐಸೋಲೇಷನ್ ಮಾಡಲಾಗಿದೆ.

ಅವರು ಇಂದು ಬೆಳಿಗ್ಗೆ ವಿದ್ಯಾಗಿರಿಯ ಜೆಎಸ್‍ಎಸ್ ಪಿಯು ಕಾಲೇಜಿನಲ್ಲಿ ಆರಂಭಿಸಲಾದ 15 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕಾಕರಣ ಅಭಿಯಾನಕ್ಕೆ ಭೇಟಿ ನೀಡಿ, ಪರಿಶೀಲನೆ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈಗ ಓಮಿಕ್ರಾನ್ ದೃಢವಾಗಿರುವುದರಿಂದ ಇನ್ನೊಂದು ಬಾರಿ ಎಲ್ಲ 395 ಜನರಿಗೂ ಕೋವಿಡ್ ಟೆಸ್ಟ್ ಮಾಡಲು ಕ್ರಮ ವಹಿಸಲಾಗಿದೆ. ಮತ್ತು ಸೋಂಕಿತ ಮಹಿಳೆಗೆ ಹಾಗೂ ಬಾಲಕಿಗೆ ನೆಗೆಟಿವ್ ವರದಿ ಬರುವವರೆಗೆ ಹೋಂ ಐಸೋಲೇಷನ್ ಹಾಗೂ ಆರೋಗ್ಯ ಇಲಾಖೆಯಿಂದ ನಿಗಾ ಮುಂದುವರೆಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಧಾರವಾಡದಲ್ಲಿಯೂ ಸೋಂಕು ನಿಧಾನಗತಿಯಲ್ಲಿ ಜಾಸ್ತಿ ಆಗುತ್ತಿದೆ. ಯಾರೂ ಭಯ ಪಡಬಾರದು. ಕೋವಿಡ್ ನಿಯಂತ್ರಣದ ಮುಂಜಾಗೃತೆಗಾಗಿ ತಪ್ಪದೇ ಎಲ್ಲರೂ ಮಾಸ್ಕ್ ಧರಿಸಬೇಕು. ಮತ್ತು ಸ್ಯಾನಿಟೈಸರ್ ಬಳಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. 

ಜಿಲ್ಲೆಯಲ್ಲಿ ಕೋವಿಡ್ ಸದ್ಯ 62 ಸಕ್ರಿಯ ಪ್ರಕರಣಗಳು ಇದ್ದು, 9 ಜನ ಆಸ್ಪತ್ರೆಯಲ್ಲಿ ಇದ್ದಾರೆ. 53 ಜನ ಹೋಮ್ ಐಸೋಲೇಷನ್‍ ನಲ್ಲಿದ್ದಾರೆ.

ಮುಂಬರುವ ಎರಡು ತಿಂಗಳು ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹುಷಾರಾಗಿ ಇರಬೇಕು. ತಮಗೋಸ್ಕರ ತಮ್ಮ ಕುಟುಬಂದವರಿಗೋಸ್ಕರ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು.

ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಇದ್ದರು.


Share this article!

Leave a Reply

Your email address will not be published. Required fields are marked *

error: Content is protected !!