ಕಳೆದ ಜುಲೈ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡದ ಸದಸ್ಯರಾಗಿರುವ ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಜೆ.ಗುರುಪ್ರಸಾದ, ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶ್ ಕುಮಾರ್ ಅವರನ್ನು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.
ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಅವರು ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯ ಅತಿವೃಷ್ಟಿ ಹಾನಿಯ ವಿವರಗಳನ್ನು ಕೇಂದ್ರ ಅಧ್ಯಯನ ತಂಡಕ್ಕೆ ವಿವರಿಸಿದರು.
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಜೈಭಾರತ ಕಾಲೋನಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಮನೆ, ಹೂಲಿಕೆರೆ ಗ್ರಾಮದ ಇಂದಿರಮ್ಮ ಕೆರೆ ಒಡೆದ ಪರಿಣಾಮ ಹಾನಿಗೊಳಗಾದ ಮೆಕ್ಕೆಜೋಳ, ಕಬ್ಬು,ಅಡಿಕೆ ಬೆಳೆ ಹಾನಿ ಹಾಗೂ ಮಣ್ಣು ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪ್ರಮಾಣ ವೀಕ್ಷಿಸಿದರು.
ಅಲ್ಲಿಂದ ಹೂಲಿಕೇರಿ ಕಕ್ಕೇರಿ ರಸ್ತೆ ,ಅಳ್ನಾವರದ ಡೌಗಿ ನಾಲಾ, ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಣಚಿ ಸೇತುವೆ ಹಾಗೂ ಅರವಟಗಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.
ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಮಾತನಾಡಿ,ಕೇಂದ್ರ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ಅತಿವೃಷ್ಟಿ ಅಧ್ಯಯನ ತಂಡವು ಇಂದು ಜಿಲ್ಲೆಯ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಜಿಲ್ಲೆಯಲ್ಲಿ ಸುಮಾರು 500 ಕೋಟಿ ರೂ.ಮೌಲ್ಯದ ಆಸ್ತಿ ಪಾಸ್ತಿ,ಬೆಳೆ ಹಾನಿಯಾಗಿದೆ.
ಎನ್.ಡಿ.ಆರ್.ಆಫ್.ಮಾರ್ಗದರ್ಶಿ ಸೂತ್ರಗಳ ಪ್ರಕಾರ 45 ಕೋಟಿ ರೂ.ಹಾನಿ ಅಂದಾಜಿಸಲಾಗಿದೆ. ತಂಡವು ಕಂಬಾರಗಣವಿ, ಹೂಲಿಕೆರೆ,ಅಳ್ನಾವರ, ಪುರ,ಬೆಣಚಿಯ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಹೂಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ಒಡೆದ ಪರಿಣಾಮ ಸುಮಾರು 7 ಕಿ.ಮೀ.ಉದ್ದದ ಕೃಷಿ ಭೂಮಿ ಕುಸಿತವಾಗಿರುವ ಸ್ಥಳ, ಮೆಕ್ಕೆಜೋಳ,ಬಾಳೆ,ಅಡಿಕೆ,ತೆಂಗು ಬೆಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದರು.
ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಡೌಗಿ ನಾಲಾ, ಲೋಕೋಪಯೋಗಿ ಹಾಗೂ ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ ಹಾನಿಗೊಳಗಾದ ರಸ್ತೆ ಹಾಗೂ ಸೇತುವೆಗಳನ್ನೂ ಕೂಡ ವೀಕ್ಷಿಸಿದೆ ಎಂದರು.
ಇಂದಿರಮ್ಮನ ಕೆರೆ ದುರಸ್ತಿಗೆ 9.4 ಕೋಟಿ ಪ್ರಸ್ತಾವನೆಗೆ ಒಪ್ಪಿಗೆ: ಹೂಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆಯಿಂದ 9.4 ಕೋಟಿ ರೂ.ಮೊತ್ತದ ಕಾಮಗಾರಿಗೆ ಪ್ರಾಥಮಿಕ ಅನುಮೋದನೆ ದೊರೆತಿದ್ದು,ಸರ್ಕಾರದ ಆದೇಶವೂ ಆಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ) ಯ ಇಂಜಿನಿಯರುಗಳು 9.4 ಕೋಟಿ ರೂ.ಅಂದಾಜಿಗೆ ಅನುಮೋದನೆ ನೀಡಿದ್ದಾರೆ.ಸುರತ್ಕಲ್ ಎನ್.ಐ.ಟಿ. ಗೆ ವಿನ್ಯಾಸ ಅಧ್ಯಯನಕ್ಕೆ ನೀಡಲಾಗಿದೆ.ನಂತರ ತಾಂತ್ರಿಕ ಮಂಜೂರಾತಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲ, ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಚೌಡಣ್ಣವರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ ಮುನವಳ್ಳಿ,ಅಳ್ನಾವರ ತಹಸೀಲ್ದಾರ ಅಮರೇಶ ಪಮ್ಮಾರ ಮತ್ತಿತರರು ಇದ್ದರು.