ಧಾರವಾಡ ಸೇರಿದಂತೆ ನಾಡಿನ‌ ಐತಿಹಾಸಿಕ ಸ್ಥಳಗಳ ಮಹತ್ವ ಸಾರುವ ಗ್ರಂಥ ಸರಣಿ ಪ್ರಕಟಣೆಗೆ ಯೋಜನೆ

ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವ ಧಾರವಾಡ ಸೇರಿದಂತೆ ನಾಡಿನ ಪ್ರಮುಖ ಸ್ಥಳಗಳ ಕುರಿತು ಗ್ರಂಥಗಳ ಸರಣಿ ಪ್ರಕಟಿಸುವ ಯೋಜನೆಯನ್ನು ರೂಪಿಸಿ ಮುಂಬರುವ ಆಯವ್ಯಯದಲ್ಲಿ ಹಣ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಿನ್ನೆ ಚನ್ನವೀರಗೌಡ ಅಣ್ಣಾ ಪಾಟೀಲ ಸಂಸ್ಮರಣಾ ದತ್ತಿ ಹಾಗೂ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿಸಲಾರರು. ಸರ್ಕಾರದ ವತಿಯಿಂದಲೇ ಧಾರವಾಡ ಸೇರಿದಂತೆ ನಾಡಿನ ಐತಿಹಾಸಿಕ ಸ್ಥಳಗಳ ಗ್ರಂಥಗಳನ್ನು ಪ್ರಕಟಿಸುವ ಕಾರ್ಯಕ್ರಮವನ್ನು ಆಯವ್ಯಯದಲ್ಲಿ ಹಾಕಿಕೊಳ್ಳಲಾಗುವುದು.

ಧಾರವಾಡದ ಚರಿತ್ರೆ ದಾಖಲಿಸುವ ಕಾರ್ಯದ ಜವಾಬ್ದಾರಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ವಹಿಸಲಾಗುವುದು. ಸಂಘಕ್ಕೆ ಅಗತ್ಯವಿರುವ ಅನುದಾನ,ನಿವೇಶನ ಮತ್ತಿತರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮವಾಗಿ ಬೆಂಬಲಿಸಲಿದೆ. 

ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡದ ಹಲವು ಸಂಸ್ಥೆಗಳ ಸ್ಥಾಪನೆ,ಕರ್ನಾಟಕ ರಾಜ್ಯ ರಚನೆಗೆ ಕಾರಣವಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮಹತ್ವದ ಸ್ಥಾನವಿದೆ.

ನಾಡೋಜ ಪಾಟೀಲ ಪುಟ್ಟಪ್ಪನವರು ಸುಮಾರು 52 ವರ್ಷಗಳ ಕಾಲ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ ಹೋರಾಟ ಮಾಡಿದ್ದಾರೆ ಅವರ ಸಾಧನೆಯನ್ನು ಗೌರವಿಸಲು ಸರ್ಕಾರ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಸ್ಮಾರಕ ನಿರ್ಮಿಸಲಿದೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಚನ್ನವೀರಗೌಡ ಅಣ್ಣಾ ಪಾಟೀಲ ಅವರು ಧಾರವಾಡಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

ಲಿಂಗಾಯತ ಟೌನ್ ಹಾಲ್,ವೀರಶೈವ ಮಹಾಸಭೆ,ಕೆಸಿಸಿ ಬ್ಯಾಂಕ್ ಸ್ಥಾಪನೆ , ಎನ್ ಹೆಚ್ 4 ನಿರ್ಮಾಣ ಸೇರಿದಂತೆ ಹಲವು ಮಹತ್ವದ ಚಾರಿತ್ರಿಕ ಕಾರ್ಯಗಳನ್ನು ಅವರು ನಿರ್ವಹಿಸಿದ್ದಾರೆ.

ಇತಿಹಾಸವನ್ನು ತಿರುಚುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಇದು ಸರಿಯಲ್ಲ.ಸತ್ಯವನ್ನು ವಸ್ತುನಿಷ್ಠವಾಗಿ ದಾಖಲಿಸಬೇಕು ಎಂದರು.

ದತ್ತಿದಾನಿಗಳ ಪರವಾಗಿ ಮಹಾನಗರಪಾಲಿಕೆ ಮಾಜಿ ಸದಸ್ಯ ಸಿ.ಎಸ್.ಪಾಟೀಲ ಮಾತನಾಡಿ, ಬ್ರಿಟಿಷ್ ಸರ್ಕಾರದಲ್ಲಿ ಇಂಜಿನಿಯರ್ ಆಗಿದ್ದ ಚನ್ನವೀರಗೌಡ ಅಣ್ಣಾ ಪಾಟೀಲ ಅವರ ಸಾಧನೆ ಹಿರಿಯದಾಗಿದ್ದರೂ ಇನ್ನೂ ಸಾಕಷ್ಟು ಬೆಳಕಿಗೆ ಬರಬೇಕಾಗಿದೆ ಎಂದರು.

ಗ್ರಂಥ ಪರಿಚಯಿಸಿದ ಶಶಿಧರ ತೋಡಕರ್ ಅವರು, ಧಾರವಾಡದ ಚಾರಿತ್ರಿಕ ವ್ಯಕ್ತಿ ಚನ್ನವೀರಗೌಡ ಅಣ್ಣಾ ಪಾಟೀಲರು ಸರ್ಕಾರಿ ಇಂಜಿನಿಯರ್ ವೃತ್ತಿಯ ಜೊತೆಗೆ ಸಮಾಜಕ್ಕಾಗಿ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ.

ಪಿಬಿ ರಸ್ತೆ ನಿರ್ಮಾಣ,ಕೆಸಿಸಿ ಬ್ಯಾಂಕ್,ಎಲ್ ಇ ಎ ಸ್ಥಾಪನೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.ಕೃಷಿ ವಿವಿ ಸ್ಥಾಪನೆಗೆ ಜಮೀನು ನೀಡಿದ ಕೊಡುಗೆಯೂ ಅಮೂಲ್ಯ ಎಂದರು.

ದೇವರ ಹುಬ್ಬಳ್ಳಿ ಸಿದ್ಧಾರೂಢಮಠದ ಶಿವಸಿದ್ಧಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಾಜಿ ಸಚಿವ ಶಶಿಕಾಂತ ನಾಯ್ಕ,ಮಾಜಿ ಶಾಸಕ ಎ.ಬಿ.ದೇಸಾಯಿ,ಗ್ರಂಥಕರ್ತೃ ಮಲ್ಲಿಕಾರ್ಜುನ ಪಾಟೀಲ, ಶಶಿಧರ ತೋಡಕರ್,ರೇಖಾ ಶೆಟ್ಟರ್,ಬಿ.ವೈ.ಬಂಡಿವಡ್ಡರ, ಚಂದ್ರಗೌಡ ಎಸ್.ಪಾಟೀಲ ,ಡಾ.ಅರವಿಂದ ಯಾಳಗಿ,ರಾಜು ಪಾಟೀಲ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು, ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಆಶಯ ನುಡಿಗಳನ್ನಾಡಿದರು.ಸಹ ಕಾರ್ಯದರ್ಶಿ ಶಂಕರ ಕುಂಬಿ ಕಾರ್ಯಕ್ರಮ ನಿರೂಪಿಸಿದರು.

Share this article!

Leave a Reply

Your email address will not be published. Required fields are marked *

error: Content is protected !!