ಧಾರವಾಡ ಸಶಸ್ತ್ರ ಮೀಸಲು ವಾರ್ಷಿಕ ಪೊಲೀಸ್ ಕ್ರೀಡಾಕೂಟ ಮುಕ್ತಾಯ

ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಇಂದು ನೆರವೇರಿತು.

ಪೊಲೀಸರು ತಮ್ಮ ದಿನನಿತ್ಯದ ಕಾರ್ಯ ಒತ್ತಡದಲ್ಲಿ ವ್ಯಾಯಾಮಕ್ಕೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ಸಾರ್ವಜನಿಕರು ನೆನೆಯುವ ಕಾರ್ಯಗಳಲ್ಲಿ ಪೊಲೀಸರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.

ಬೆಂಗಳೂರಿಗಿಂತ ಹುಬ್ಬಳ್ಳಿ ಧಾರವಾಡ ನನಗೆ ಪ್ರಿಯವಾದ ನಗರವಾಗಿದೆ. ಐಪಿಎಸ್ ಅಧಿಕಾರಿಯಾಗುವ ಮೂಲಕ ನನ್ನ ತಾಯಿಯ ಆಸೆಯನ್ನು ಈಡೇರಿಸಿದ ಹೆಮ್ಮೆ ನನಗಿದೆ. ಅವಳಿ ನಗರದಲ್ಲಿ ಕರ್ತವ್ಯ ನಿರ್ವಹಿಸಲು ಹೆಮ್ಮೆ ಪಡಬೇಕು.

ಪರಸ್ಪರರು ಬೆರೆಯುವ ಮನೋಭಾವ ಬೆಳಿಸಿಕೊಳ್ಳಿ. ಅವಳಿ ನಗರದಲ್ಲಿ ಮುಖ್ಯಮಂತ್ರಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಹೆಸರು ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂ ರಾಮ್ ಸ್ವಾಗತಿಸಿ ಮಾತನಾಡಿ, ಕ್ರೀಡಾ ಮನೋಭಾವದಿಂದ ಎಲ್ಲರೂ ಭಾಗವಹಿಸಿದ್ದೀರಿ.

ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಯಶಸ್ಸು ದೊರೆಯಲಿ ಎಂದು ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಡಾ.ಡಿ.ವಿ. ಗುರುಪ್ರಸಾದ್ ಅವರು ಬರೆದ ಸಿಸ್ಟರ್ ಅಭಯಾ ಸಾವು ಕೊಲೆಯೋ? ಆತ್ಮಹತ್ಯೆಯೋ? ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ನಗರ ಸಶಸ್ತ್ರ ದಳ ತಂಡವು ಪಡೆದುಕೊಂಡಿತ್ತು. ಪುರುಷರ ವಿಭಾಗದಲ್ಲಿ ಸತತ 13 ನೇ ಬಾರಿ ಈರಣ್ಣ ದೇಸಾಯಿ ಮತ್ತು ಮಹಿಳಾ ವಿಭಾಗದಲ್ಲಿ ಶೃತಿ ಅಕ್ಕೊಳ್ಳಿ ಅವರು ವೈಯುಕ್ತಿಕ ವೀರಾಗ್ರಣಿಯಾಗಿ ಹೊರ ಹೊಮ್ಮಿದರು.

ಆರಕ್ಷಕ ನಿರೀಕ್ಷಕರಾದ ಮಾರುತಿ ಹೆಗಡೆ ಕ್ರೀಡಾ ಕವಾಯತು ನಾಯಕತ್ವದಲ್ಲಿ ದಕ್ಷಿಣ, ಉತ್ತರ, ಮಹಿಳಾ, ಸಿಎಆರ್, ಧಾರವಾಡ ಮತ್ತು ಸಂಚಾರ ವಿಭಾಗದ ತಂಡಗಳು ಪಥ ಸಂಚಲನ ನಡೆಸಿದವು. ವೈಯಕ್ತಿಕ ಹಾಗೂ ಗುಂಪು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿಸಿಪಿ ಸಾಹಿಲ್ ಬಾಗ್ಲಾ, ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಹಾಜರಿದ್ದರು. ಪೊಲೀಸ್ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನಿರೂಪಿಸಿದರು. ಡಿಸಿಪಿ ಗೋಪಾಲ ಬ್ಯಾಕೋಡ ವಂದಿಸಿದರು.

Share this article!

Leave a Reply

Your email address will not be published. Required fields are marked *

error: Content is protected !!